ಕನ್ನಡಪ್ರಭ ವಾರ್ತೆ ವಿಜಯಪುರ
ಉಗ್ರವಾದಿ ಹಾಗೂ ಗಂಭೀರ ಸ್ವರೂಪದ ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಜೈಲಿನಲ್ಲಿ ರಾಜಾತೀಥ್ಯ ನೀಡುವುದು ಬೆಳಕಿಗೆ ಬಂದಿದ್ದು, ಕೂಡಲೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ನೇತೃತ್ವ ವಹಿಸಿ ಮಾತನಾಡಿ, ಉಗ್ರವಾದಿಗಳಿಗೆ ರಾಜಾತೀಥ್ಯ ನೀಡುತ್ತಿರುವುದು ಖಂಡನಾರ್ಹ, ಜೈಲುಗಳಲ್ಲಿ ಉಗ್ರವಾದಿಗಳು ರಾಜಾರೋಷವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ, ಪರಪ್ಪನ ಅಗ್ರಹಾರ ಜೈಲು ಒಂದು ರೀತಿ ನೈಟ್ ಕ್ಲಬ್ ಆಗಿ, ಮನರಂಜನಾ ಕ್ಲಬ್ ಆಗಿ ಪರಿವರ್ತನೆಗೊಂಡಿದೆ. ಭಯೋತ್ಪಾದಕರು, ಐಎಸೈ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳು- ಇವರೆಲ್ಲರಿಗೂ ಪರಪ್ಪನ ಅಗ್ರಹಾರ ಜೈಲು ಮನರಂಜನಾ ಕ್ಲಬ್ ಆಗಿದೆ. ಇಂಥ ದೇಶದ್ರೋಹಿಗಳಿಗೆ ಟಿ.ವಿ, ಮೊಬೈಲ್ ಫೋನ್ ಮೊದಲಾದ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದರು.ಈ ರೀತಿಯ ಘಟನೆಗಳು ನಡೆಯುತ್ತಿರುವುದು ರಾಜ್ಯ ಸರ್ಕಾರವು ಕಣ್ಮುಚ್ಚಿ ಕುಳಿತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಗಳನ್ನು ಪರಪ್ಪನ ಅಗ್ರಹಾರ ಜೈಲಲ್ಲಿ ಮಾಡಲಾಗಿದೆ. ಪತ್ರಿಕೆಗಳಲ್ಲಿ- ದೃಶ್ಯ ಮಾಧ್ಯಮಗಳಲ್ಲಿ ಮಾಹಿತಿ ಬಂದ ನಂತರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಿನ್ನೆ ದಾಳಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದೇರೀತಿ ಜೈಲಿನ ವ್ಯವಸ್ಥೆಯೂ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿದೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಈ ರೀತಿ ಜೈಲಿನಲ್ಲಿ ವ್ಯವಸ್ಥೆ ಆಗಲು ಸಾಧ್ಯವಿಲ್ಲ. ಇಸ್ಲಾಮಿನ ಮೂಲಭೂತವಾದಿಗಳಿಗೆ ಈ ರೀತಿ ಮಾಡಿದ್ದು ದೇಶದ್ರೋಹದ ಕೆಲಸ ಎಂದು ಆರೋಪಿಸಿದರು.ಈ ರೀತಿಯ ಎಲ್ಲ ಘಟನೆಗಳಿಗೂ ಸಹ ರಾಜ್ಯದ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ನೇರ ಹೊಣೆಗಾರರು. ಸುಮ್ಮನೆ ನಾಟಕ ಮಾಡಿ ತಿಪ್ಪೆ ಸಾರಿಸುವ ಕೆಲಸ ಮಾಡದೇ ಕೂಡಲೇ ರಾಜೀನಾಮೆ ನೀಡಿ ಹೊರಬರಬೇಕು ಎಂದು ಒತ್ತಾಯಿಸಿದರು.ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ ಮಾತನಾಡಿ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯದಲ್ಲಿ ಜನರ ಹಿತರಕ್ಷಣೆಗಾಗಿ ಚಿಂತಿಸಬೇಕಾದ ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಹೀಗಾಗಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಮಳನಗೌಡ ಪಾಟೀಲ, ಈರಣ್ಣ ರಾವೂರ, ಸಾಬಣ್ಣ ಮಾಶಿಹಾಳ, ಬಸವರಾಜ್ ಬೈಚಬಾಳ, ಭೀಮಣ್ಣ ಹದನೂರ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ರಾಠೋಡ ನೇಬಗೇರಿ, ಮಹೀಂದ್ರ ನಾಯಕ, ಭರತ ಕೋಳಿ, ಸಂದೀಪ್ ಪಾಟೀಲ್, ರಾಜಕುಮಾರ್ ಸಗಾಯಿ, ಆನಂದ ಮುಚ್ಚಂಡಿ, ವಿಕಾಸ ಕಿಟ್ಟಾ, ಜಗದೀಶ್ ಸುಣಗದ, ವಿಜಯ ಜೋಶಿ, ಶ್ರೀಕಾಂತ ಶಿಂಧೆ, ಸ್ವಪ್ನಾ ಕಣಮುಚನಾಳ, ಶಿವರುದ್ರ ಬಾಗಲಕೋಟ, ಸ್ವರೂಪ ಸಪ್ತಾಳೆ, ವಿಠ್ಠಲ ಕಾಗರ, ವಿನೋದ ಪತ್ತಾರ, ಸಾಯಬಣ್ಣಾ ಮಾಶ್ಯಾಳ, ರವಿ ಬಿರಾದಾರ, ನಾಗೇಶ್ ಶಿಂಧೆ, ಸಂಪತ ಕೋಳಿ, ಚಿದಾನಂದ ಛಲವಾದಿ, ರಾಹುಲ್ ಜಾಧವ್, ಸಿದ್ದು ಬುಳ್ಳಾ, ಮಲ್ಲಿಕಾರ್ಜುನ ಕಲಾದಗಿ, ರಾಜೇಶ್ ತಾವಸೆ, ಭರತ್ ಕುಲಕರ್ಣಿ, ಪಾಪುಸಿಂಗ್ ವಿಕಾಸ್ ಪದಕಿ, ಪಾಪುಸಿಂಗ್ ರಜಪೂತ್, ಚನ್ನು ಚನಗೊಂಡ, ಮಲ್ಲಮ್ಮ ಜೋಗುರ, ಗೀತಾ ಕುಗನೂರ ಮೊಲದಾದವರು ಪಾಲ್ಗೊಂಡಿದ್ದರು.