ಕನ್ನಡಪ್ರಭ ವಾರ್ತೆ ಬೆಂಗಳೂರು
2,000 ಕೋಟಿ ರು. ವೆಚ್ಚದಲ್ಲಿ ವಿಶ್ವಬ್ಯಾಂಕ್ ನೆರವಿನ ‘ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ’ ಕಾರ್ಯಕ್ರಮದಡಿ 174 ಕಿ.ಮೀ ವಿಸ್ತೀರ್ಣದ ನೀರುಗಾಲುವೆ ನಿರ್ಮಾಣ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಗುಂಜೂರಿನಲ್ಲಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮಳೆ ಬಂದಾಗ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆ ಆಗುವುದನ್ನು ತಪ್ಪಿಸಿ ಶಾಶ್ವತ ಪರಿಹಾರ ಕಲ್ಪಿಸಲು 2,000 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲೆಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ, ಎಲ್ಲಿ ತಡೆಗೋಡೆ ನಿರ್ಮಿಸಬೇಕು ಎಂಬುದರ ಕುರಿತು ಸಮಗ್ರ ನಕ್ಷೆ ಸಿದ್ಧಪಡಿಸಿ ಪರಿಶೀಲಿಸಲಾಗುತ್ತಿದೆ. ಫ್ಲೈಓವರ್, ಡಬಲ್ ಡೆಕ್ಕರ್ ರಸ್ತೆ ಹಾಗೂ ಮೆಟ್ರೋ ವಿಸ್ತರಣೆಯಂತಹ ಯೋಜನೆಗಳಿಗೂ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.ಐಟಿ-ಬಿಟಿ ಉದ್ಯಮಗಳು ಹೆಚ್ಚಾಗಿರುವ ಭಾಗದಲ್ಲಿ ಉದ್ಯೋಗಿಗಳ ಮೇಲೆ ಸಂಚಾರದ ಸಮಸ್ಯೆಯು ಹೆಚ್ಚಾಗಿದೆ. ಅವರು ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದಾರೆ. ಅದಕ್ಕಾಗಿಯೇ, ಈ ಭಾಗದ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಅನುದಾನ ಒದಗಿಸಲಾಗಿದೆ. ಇಡೀ ಬೆಂಗಳೂರನ್ನು ಒಂದೇ ಬಾರಿಗೆ ಸರಿಪಡಿಸಲು ಸಾಧ್ಯವಿಲ್ಲ. ಕಟ್ಟಡಗಳನ್ನು ಒಡೆದು ರಸ್ತೆ ಅಗಲೀಕರಣ ಮಾಡುವುದೂ ಪರಿಹಾರವಲ್ಲ. ಜನರಿಗೆ ಕಡಿಮೆ ತೊಂದರೆಯಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಭೂಮಿ ಗ್ಯಾರಂಟಿಯನ್ನೂ ನೀಡಲಾಗಿದೆ. ಗೃಹಲಕ್ಷ್ಮಿ ಸೇರಿದಂತೆ ಕೆಲವು ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆ ಮತ್ತು ಇತರ ವಿವರಗಳಲ್ಲಿ ಸಮಸ್ಯೆಗಳಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪುವಂತೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ, ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಭಾರತ್ ಜೋಡೋ ಯುವ ಸಂಘಗಳ ಮೂಲಕ ಯುವಶಕ್ತಿಯನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.
ನಗರದ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಅನುಭವ ಇಲ್ಲದ ವ್ಯಕ್ತಿಯೊಬ್ಬ ಸುರಂಗ ರಸ್ತೆಗೆ ಅಡ್ಡಿಪಡಿಸುತ್ತಿದ್ದಾನೆ. ಕೋರ್ಟ್‌ಗೆ ಅರ್ಜಿ ಹಾಕುವುದು ಮುಂತಾದ ಕೆಲಸಗಳನ್ನು ಮಾಡಲಾಗುತ್ತಿದೆ. ಈ ರೀತಿ ಅಭಿವೃದ್ಧಿ ಯೋಜನೆಗಳಿಗೆ ಅನಗತ್ಯ ಅಡ್ಡಿಪಡಿಸುವುದು ಸರಿಯಲ್ಲ. ಎಲ್ಲರೂ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಸುಮಾರು 45 ಲಕ್ಷ ಮತಗಳು ಕಡಿಮೆಯಾಗಿವೆ. ಆದರೆ, ಹೊಸದಾಗಿ ಸೇರ್ಪಡೆ ವೇಳೆ ಕೆಲವು ಕ್ಷೇತ್ರಗಳಲ್ಲಿ 12 ರಿಂದ 15 ಸಾವಿರ ಮತಗಳಿಗೆ ಸೂಕ್ತ ದಾಖಲೆಗಳು ಇಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಕಳ್ಳತನ ಮತಗಳು ಇರಬಾರದು. ಹೀಗಾಗಿ, ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಯವರು ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಐದು ನಗರ ಪಾಲಿಕೆಗಳಿಗೆ ಚುನಾವಣೆ ಆಗುವುದು ಗ್ಯಾರಂಟಿ. ಅದನ್ನು ತಡೆಯಲಾಗದು. ವಿರೋಧ ಪಕ್ಷಗಳಿಗೆ ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರ ನೀಡಬೇಕು. ರಾಜಕಾರಣ ಬರುತ್ತದೆ, ಹೋಗುತ್ತದೆ. ಆದರೆ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಯಾರು ಜನರಿಗಾಗಿ ದುಡಿಯುತ್ತಾರೋ ಅವರಿಗೆ ಜನರು ಗೌರವ ನೀಡುತ್ತಾರೆ ಎಂಬ ವಿಶ್ವಾಸವಿದೆ. ನಗರದ ಗೌರವ ಮತ್ತು ಅಭಿವೃದ್ಧಿಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.