ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ರಾಜಕೀಯ ಪ್ರೇರಿತವಾಗಿದ್ದು, ಕಾಂಗ್ರೆಸ್ ಹೈಕಮಾಂಡ ಮುಂದೆ ಶಕ್ತಿ ಪ್ರದರ್ಶನಕ್ಕಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಎಸ್‌ಡಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಬ್ರಾರ್ ಅಹಮದ್ ಅವರು ಆರೋಪಿಸಿದ್ದಾರೆ.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆ ಕೊಟ್ಟರೆ ರಾಜ್ಯದ ಜನತೆ ಸುಮ್ಮನಿರುವುದಿಲ್ಲ, ಸರ್ಕಾರದಿಂದ ಜನರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯ ನೀಡಬೇಕು. ಆದರೆ ಮುಖ್ಯಮಂತ್ರಿ ರಾಜ್ಯದಲ್ಲಿ ಸೀಟು ಉಳಿಸಿಕೊಳ್ಳಲು ದೆಹಲಿಗೆ ಓಡಾಡುತ್ತಿದ್ದಾರೆ. ಶಕ್ತಿ ಪ್ರದರ್ಶನಕ್ಕಾಗಿ ಚಾಮರಾಜನಗರಕ್ಕೆ ಆಗಮಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದರಿಂದ ರಾಜ್ಯದ ಜನತೆ ಗೆಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ತೇಲುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಬಿಹಾರದಲ್ಲಿ ಗೆಲುವು ಸಿಗಲಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಕೊಟ್ಟಿರುವುದಿಂದ ಗೆದ್ದಿಲ್ಲ ಕೋಮುವಾದಿ ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.ಜಿಲ್ಲೆಯಲ್ಲಿ ಆಕ್ಸಿಜನ್ ದುರಂತದಿಂದ ಸಾವಿಗೀಡಾದವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡುತ್ತೇವೆ. ಜಿಲ್ಲಾ ಕೇಂದ್ರಕ್ಕೆ ಕುಡಿಯುವ ನೀರಿನ ಯೋಜನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೈಕಮೆಂಡ್ ಮುಂದೆಯೇ ಆಶ್ವಾಸನೆ ನೀಡಿ ಸಂತ್ರಸ್ತರಿಗೆ ಅಧಿಕೃತ ಆದೇಶವಿರುವ ಸುತ್ತೋಲೆ ಹೊರಡಿಸಿಲ್ಲ. ನೈತಿಕತೆ ಇದ್ದರೆ ಮುಖ್ಯಮಂತ್ರಿ ಆದೇಶ ಹೊರಡಿಸಬೇಕು ಎಂದರು.
ಚಾಮರಾಜನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗೂವುದಿಲ್ಲ, ಸಿಎಂಗೆ ಮುಜುಗರವಾಗುವುದು ಬೇಡ. ಆಶ್ವಾಸನೆ ಈಡೇರಿಸಲಿ ಎಂದು ಎಸ್‌ಡಿಪಿಐ ವತಿಯಿಂದ ಪ್ರಶ್ನೆ ಮಾಡಬೇಕಿದೆ. ಜಿಲ್ಲಾಧಿಕಾರಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು..ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ ಮಾತನಾಡಿ, ಚಾಮರಾಜನಗರ ಜಿಲ್ಲಾಕೇಂದ್ರ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು, ಜಿಲ್ಲಾ ಕೇಂದ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮುಖ್ಯಮಂತ್ರಿ ಚಾಮರಾಜನಗರಕ್ಕೆ ಭೇಟಿ ನೀಡಿದಾಗಲೆಲ್ಲ ಮನವಿ ಮಾಡಲಾಗಿದೆ. ಇದುವರೆಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಈ ಬಾರಿಯಾದರೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾ, ಉಪಾಧ್ಯಕ್ಷ ನಯಾಜ್ ಉಲ್ಲಾ, ಕಾರ್ಯದರ್ಶಿ ಜಬೀ ನೂರ್, ನಗರ ಘಟಕ ಅಧ್ಯಕ್ಷ ಮಜರ್ ಖಾನ್ ಇದ್ದರು.