ಸಿಎಂ ಖುರ್ಚಿ ಸದ್ಯದಲ್ಲೇ ಶೇಕ್‌ : ಬಿಜೆಪಿ

KannadaprabhaNewsNetwork |  
Published : Oct 04, 2025, 01:00 AM ISTUpdated : Oct 04, 2025, 07:55 AM IST
CM Siddaramaiah

ಸಾರಾಂಶ

ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ನಾನೆ ಇರುತ್ತೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಟೀಕಾಪ್ರಹಾರ ನಡೆಸಿರುವ ಬಿಜೆಪಿ ನಾಯಕರು, ಸಿಎಂ ಖುರ್ಚಿ ಸದ್ಯದಲ್ಲೇ ಶೇಕ್‌ ಆಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

 ಬೆಂಗಳೂರು :  ‘ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ನಾನೆ ಇರುತ್ತೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಟೀಕಾಪ್ರಹಾರ ನಡೆಸಿರುವ ಬಿಜೆಪಿ ನಾಯಕರು, ಸಿಎಂ ಖುರ್ಚಿ ಸದ್ಯದಲ್ಲೇ ಶೇಕ್‌ ಆಗಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಅಸ್ಥಿರತೆಯ ಲಕ್ಷಣ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದ್ದರೆ, ಡಿಸೆಂಬರ್ ಒಳಗೆ ಸಿಎಂ ಬದಲಾವಣೆ ಖಚಿತ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಭವಿಷ್ಯ ನುಡಿದಿದ್ದಾರೆ. ಸಿಎಂ ಹೇಳಿಕೆಯಿಂದ ಡಿಕೆಶಿ ಬಗ್ಗೆ ನನಗೆ ಅನುಕಂಪವಾಗುತ್ತಿದೆ ಎಂದು ಸುನಿಲ್‌ ಕುಮಾರ್ ವ್ಯಂಗ್ಯವಾಡಿದ್ದರೆ, ಸಿದ್ದು ಹೇಳಿಕೆಯಿಂದ ಕಾಂಗ್ರೆಸ್‌ ಹೈಕಮಾಂಡ್‌ ದುರ್ಬಲವಾಗಿರುವುದು ತಿಳಿಯುತ್ತಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ. 

ಸಿದ್ದುಗೆ ವಿಶ್ವಾಸವಿಲ್ಲವೇ?: ಜೋಶಿ

 ಹುಬ್ಬಳ್ಳಿ :  ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ಅಸ್ಥಿರತೆಯ ಲಕ್ಷಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಅಧಿಕಾರಾವಧಿ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳುವ ಅಗತ್ಯವೇನು? ಸಿದ್ದರಾಮಯ್ಯಗೆ ವಿಶ್ವಾಸವಿಲ್ಲವೇ? ತಾವು ಸಿಎಂ ಹುದ್ದೆಯಲ್ಲಿ ಮುಂದುವರಿಯುವ ವಿಶ್ವಾಸವಿಲ್ಲ, ಅಸ್ಥಿರತೆಯಿದೆ ಎಂಬುದಕ್ಕೆ ಅವರ ಈ ಹೇಳಿಕೆ ಸಾಕ್ಷಿ ಎಂದು ವ್ಯಂಗ್ಯವಾಡಿದ್ದಾರೆ.

ಈ ಗೊಂದಲ ತಪ್ಪಿಸುವ ಉದ್ದೇಶದಿಂದಲೇ ಜಾತಿ ಗಣತಿ ಆರಂಭಿಸಿದ್ದಾರೆ. ಸಮೀಕ್ಷೆ ಹೆಸರಲ್ಲಿ ಜಾತಿ ಗಣತಿ ಮಾಡುತ್ತಿದ್ದಾರೆ. ಇಲ್ಲದ ಜಾತಿಗಳನ್ನೆಲ್ಲ ಸೇರಿಸಿದ್ದಾರೆ. ಮುಜಾವರ ಬ್ರಾಹ್ಮಣ, ಬ್ರಾಹ್ಮಣ ಕ್ರಿಶ್ಚಿಯನ್‌ ಇವೆಲ್ಲ ಏನು ತೋರಿಸುತ್ತಿದೆ?. ಇವರು ಯಾವುದಾದರೂ ಸಂಘಟನೆ ಸದಸ್ಯರಾಗಿದ್ದಾರಾ?. ಎನ್ನುವ ಪ್ರಶ್ನೆಯೂ ಇದೆ. ಇದೆಲ್ಲ ಯಾಕೆ ಬೇಕು? ಎಂದು ಅವರು ಪ್ರಶ್ನಿಸಿದರು.  

ಡಿಕೆಶಿ ಬಗ್ಗೆ ಅನುಕಂಪವಾಗ್ತಿದೆ: ಸುನಿಲ್‌

 ಉಡುಪಿ : ಮುಂದಿನ ಎರಡು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಪುನಃ ಹೇಳಿದ್ದಾರೆ, ಆದ್ದರಿಂದ ಡಿ.ಕೆ.ಶಿವಕುಮಾರ್ ಬಗ್ಗೆ ನನಗೆ ಅನುಕಂಪ ಉಂಟಾಗುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನಿಲ್ ವಿ.ಕುಮಾರ್ ಹೇಳಿದ್ದಾರೆ.

ಶುಕ್ರವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೊಮ್ಮೆ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರವನ್ನು ಕಾಲಿನಿಂದ ಒದ್ದು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಮಾತು ನನಗೆ ನೆನಪಿದೆ. ಆದ್ದರಿಂದ ಅವರು ಸಹಜವಾಗಿ ಸಿಎಂ ಅಧಿಕಾರ ಪಡೆಯುತ್ತಾರೋ ಅಥವಾ ಅವರ ಸಹಜ ಗುಣದಂತೆ ಕಾಲಿನಿಂದ ಒದ್ದು ಪಡೆಯುತ್ತಾರೋ ಎಂಬ ಬಗ್ಗೆ ಜನತೆಗೆ ಕುತೂಹಲ ಇದೆ ಎಂದರು.

ಸರ್ಕಾರದಲ್ಲಾಗುತ್ತಿರುವ ಈ ಕ್ರಾಂತಿ, ಈ ಕಂಪನ ಕಾಂಗ್ರೆಸ್ ನ ಒಳಗೆ ಆಗಲಿ. ಅದರಿಂದ ರಾಜ್ಯದ ಜನತೆಗೆ ಕಂಪನ, ತೊಂದರೆ ಆಗದಿರಲಿ ಎಂದು ಹಾರೈಸಿದರು.

ಡಿಸೆಂಬರ್ ಒಳಗೆ ಸಿಎಂ ಬದಲಾವಣೆ ಖಚಿತ: ಅಶೋಕ್‌

 ಬೆಳಗಾವಿ :  ಮುಂಬರುವ ನವೆಂಬರ್‌ ಇಲ್ಲವೇ ಡಿಸೆಂಬರ್ ಒಳಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದು ಖಚಿತ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯುತ್ತಾರೆ. ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಕ್ರಾಂತಿ ಆಗುತ್ತದೆ ಎಂಬ ಹೇಳಿಕೆ ನೀಡಿದ ಒಬ್ಬರು ಸಚಿವರು ಈಗ ಮನೆಗೆ ಹೋಗಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ಜಗಳ ಶುರುವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಿಲ್ಲ. ಡಿ.ಕೆ.ಶಿವಕುಮಾರ ಹಠ ಬಿಡುತ್ತಿಲ್ಲ. ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದರು.

ಒಳಜಗಳದಿಂದ ಕಾಂಗ್ರೆಸ್‌ ಸರ್ಕಾರ ಪತನವಾದರೆ ನಾವೇನೂ ಸರ್ಕಾರ ಮಾಡುವುದಿಲ್ಲ. ನಾವು ನೇರವಾಗಿ ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ ಎಂದರು.

‘ನಾನು ಮುಖ್ಯಮಂತ್ರಿ’ ಜಪ

ಶುರುವಾಗಿದೆ: ಸಿ.ಟಿ.ರವಿ

  ಬೆಳಗಾವಿ :  ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂಬ ಜಪ ಶುರುವಾಗಿದೆ. ಆದರೆ, ಒಬ್ಬ ಭ್ರಷ್ಟ ಹೋಗಿ, ಮತ್ತೊಬ್ಬ ಭ್ರಷ್ಟ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಒಳ್ಳೆಯದಾಗದು. ಸರ್ಕಾರವೇ ಬದಲಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹರಿಹಾಯ್ದಿದ್ದಾರೆ.

ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೆರಡು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಭ್ರಷ್ಟಾಚಾರಕ್ಕಾಗಿ ನೀವು ಮುಖ್ಯಮಂತ್ರಿ ಆಗಿದ್ದಿರಿ. ಪದೇ ಪದೇ ನಾನೇ ಸಿಎಂ ಎಂಬ ಅವರ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್ ದುರ್ಬಲ ಆಗಿರುವುದರ ಸಂಕೇತ. ಮೊದಲು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳುತ್ತಿದ್ದರು. ಈಗ ನಾನೇ ಸಿಎಂ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರು ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದಾರೆ. ಮೊದಲು ನಾನೇ ಎನ್ನುವವರ ಮೇಲೆ ಕ್ರಮ ಆಗುತ್ತಿತ್ತು. ಈಗ ಇಲ್ಲ ಎಂದರು.

ಇಂದಿನ ಪರಿಸ್ಥಿತಿ ನೋಡಿದರೆ ಮುಖ್ಯಮಂತ್ರಿ ಬದಲಾವಣೆಯಾದರೂ ಪರಿಸ್ಥಿತಿ ಸುಧಾರಿಸಲ್ಲ. ಸರ್ಕಾರ ಬದಲಾದರೆ ಮಾತ್ರ ಸುಧಾರಿಸಬೇಕು. ಅವನು ಬಂದರೂ ಭ್ರಷ್ಟಾಚಾರ ಮಾಡುತ್ತಾನೆ. ಇವನು ಬಂದರೂ ಭ್ರಷ್ಟಾಚಾರ ಮಾಡುತ್ತಾನೆ. ಕಣ್ಣಿದ್ದು ಕುರುಡಾಗಿ, ಕಿವಿಯಿದ್ದು ಕಿವುಡಾಗಿದೆ ಈ ಸರ್ಕಾರ. ನೀವು ಯಾರು ಮುಖ್ಯಮಂತ್ರಿ ಎನ್ನುವುದು ಮುಖ್ಯವಲ್ಲ. ಜನ ಅಧಿಕಾರ ಕೊಟ್ಟಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ