ಕನ್ನಡಪ್ರಭ ವಾರ್ತೆ ಯಾದಗಿರಿ
ಇತ್ತೀಚೆಗೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿದ್ದ ಪ್ರಯುಕ್ತ, ಈ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಚೆನ್ನಾಗಿ ಮಾಡಬಹುದಾಗಿದ್ದು, ಡಿಡಿಪಿಐ ಹಾಗೂ ಡಿಡಿಪಿಯು ಶಾಲಾ ಕಾಲೇಜು ಆರಂಭದಿಂದಲೇ ಈ ಕುರಿತು ನಿಗಾ ವಹಿಸಿ ಸೂಕ್ತ ಯೋಜನೆ ರೂಪಿಸಬೇಕು. ನಿರಂತರ ಪರಿಶೀಲನೆ ನಡೆಸಬೇಕು, ತಾಲೂಕುವಾರು ಪೋಷಕರು, ಎಸ್ಡಿಎಂಸಿ, ಶಿಕ್ಷಕರುಗಳ ಸಭೆ ನಡೆಸಿ ಡ್ರಾಪ್ ಔಟ್ ಮಕ್ಕಳನ್ನು ಪುನಃಸೇರ್ಪಡೆ, ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯಗಳ ಉತ್ತಮ ಬಳಕೆಯೊಂದಿಗೆ ಮುಂದಿನ ವರ್ಷಗಳಲ್ಲಿ ಫಲಿತಾಂಶ ಸುಧಾರಣೆಗೆ ವಿಶೇಷ ಗಮನ ನೀಡುವಂತೆ ಸೂಚಿಸಿದರು.ಜಿಲ್ಲೆಯಲ್ಲಿ ಪ್ರತಿಶತ 60 ಕ್ಕಿಂತ ಕಡಿಮೆ ಫಲಿತಾಂಶ ಬಂದ ಕಡೆ ನೋಟಿಸ್ ಸಹ ಜಾರಿಗೊಳಿಸಲಾಗುವುದು. ಕಳೆದ ಎಸ್.ಎಸ್.ಎಲ್.ಸಿ ಸುಧಾರಣೆಗೆ ಡಿಡಿಪಿಐ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ಸವಾಲಾಗಿ ಸ್ವೀಕರಿಸಿ, ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಗಮನ ನೀಡುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕಳಪೆ ಬೀಜ , ರಸಗೊಬ್ಬರ ಮಾರಾಟವಾಗದಂತೆ ನಿಗಾ ವಹಿಸಬೇಕು. ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಗಂಭೀರವಾಗಿರಬೇಕು. ಡಿಎಪಿ (ಡೈ ಅಮೋನಿಯಂ ಪಾಸ್ಫೇಟ್) ರಸಗೊಬ್ಬರ ಬದಲಾಗಿ ಎನ್ ಪಿ ಕೆ (ಸಂಯುಕ್ತ ರಸಗೊಬ್ಬರ) ಬಳಸುವ ಬಗ್ಗೆ, ರೈತರಿಗೆ ತಿಳಿ ಹೇಳಬೇಕು. ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಅಂಗನವಾಡಿಗಳು ಸೇರಿದಂತೆ ವಿವಿಧ ನಿವೇಶನದ ಅವಶ್ಯಕತೆಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿವಿಧ ನಿಗಮಗಳ ವ್ಯಾಪ್ತಿಯಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ನಗರ ಸ್ಥಳೀಯ ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಭಿಯಾನ ರೂಪದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಚರಂಡಿ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು. ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಲವೀಶ್ ಒರಡಿಯಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್ ಎಸ್.ಪಿ. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.