ಕನ್ನಡಪ್ರಭ ವಾರ್ತೆ ಪಾಂಡವಪುರ
ಬೆಳಗ್ಗೆ 9.28ಕ್ಕೆ ಪಾಂಡವಪುರಕ್ಕೆ ಆಗಮಿಸಬೇಕಾಗಿದ್ದ ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ರೈಲು ಇಂಜಿನ್ ವ್ಯತ್ಯಯದಿಂದ ಮೈಸೂರು ನಿಲ್ದಾಣದಲ್ಲಿಯೇ ನಿಂತಿದ್ದರಿಂದ ಎರಡು ಗಂಟೆಗೂ ಹೆಚ್ಚು ಕಾಲ ಅಂದರೆ ಬೆಳಗ್ಗೆ 11.35ಕ್ಕೆ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ತಲುಪಿತು.
ಇದರಿಂದ ಮಂಡ್ಯ, ರಾಮನಗರ, ಕೆಂಗೇರಿ, ಬೆಂಗಳೂರು, ತುಮಕೂರಿಗೆ ತೆರಳಬೇಕಿದ್ದ ಪ್ರಯಾಣಿಕರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕೆ ತೆರಳಬೇಕಾಗಿದ್ದ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ತೊಂದರೆ ಅನುಭವಿಸಿದರು.ಈ ವೇಳೆ ಕೆಲವರು ಪ್ಯಾಸೆಂಜರ್ ರೈಲುಗಾಡಿ ವಿಳಂಬವಾಗಿ ಆಗಮಿಸುವ ಸುದ್ದಿ ತಿಳಿದು ಬಸ್ ಹಾಗೂ ಇತರೆ ವಾಹನಗಳ ಮೊರೆ ಹೋದರೆ, ಇನ್ನೂ ಕೆಲವರು ರೈಲುಗಾಡಿ ಬರುವವರೆಗೂ ಕಾದು ಪ್ರಯಾಣ ಬೆಳೆಸಿದರು.
ಅದೇ ರೀತಿ ತುತೂಕುಡಿಯಿಂದ ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪುವ ಟೂಟಿಕೊರಿಯನ್ (ತುತೂಕುಡಿ) ಎಕ್ಸ್ ಪ್ರೆಸ್ ರೈಲುಗಾಡಿ ಕೂಡ ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಪಾಂಡವಪುರಕ್ಕೆ ಆಗಮಿಸಿತು. ಈ ರೈಲುಗಾಡಿಯು ಬೆಳಗ್ಗೆ 8.39ರ ಬದಲಿಗೆ 9.45ಕ್ಕೆ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿತು. ಹೀಗಾಗಿ ಮೈಸೂರಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು, ಇಲಾಖೆ ನೌಕರರು, ಸಾವಿರಾರು ಪ್ರಯಾಣಿಕರು ಮಂಡ್ಯ ಹಾಗೂ ಪಾಂಡವಪುರ ನಿಲ್ದಾಣದಲ್ಲಿ ಕಾದು ಕಾದು ರೈಲ್ವೆ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.