- ಬ್ರಾಹ್ಮಣ ಸಮಾಜ ಸೇವಾ ಸಂಘ ಪ್ರತಿಭಟನೆಯಲ್ಲಿ ಒತ್ತಾಯ । ಕಾಂತರಾಜ ಆಯೋಗ ವರದಿಗೆ ವಿರೋಧ
- - -
ಕನ್ನಡಪ್ರಭ ವಾರ್ತೆ ದಾವಣಗೆರೆಅವೈಜ್ಞಾನಿಕವಾದ ಕಾಂತರಾಜ ಆಯೋಗದ ವರದಿ ತಿರಸ್ಕರಿಸುವಂತೆ, ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿ ಬ್ರಾಹ್ಮಣ ಸಮಾಜ ಸೇವಾ ಸಂಘ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಸದಸ್ಯ, ಸಮಾಜದ ಯುವ ಮುಖಂಡ ಪಿ.ಸಿ.ಶ್ರೀನಿವಾಸ ಭಟ್, 10 ವರ್ಷಗಳ ಹಿಂದೆಯೇ ಕಾಂತರಾಜ್ ಆಯೋಗ ಕೈಗೊಂಡ ಜಾತಿ ಜನಗಣತಿ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಅದರಲ್ಲಿ ಬ್ರಾಹ್ಮಣ ಸಮಾಜದ ಜನಗಣತಿ 17,83,428 ಮಾತ್ರ ತೋರಿಸಿದ್ದು, ಶೇ.2.98ರಷ್ಟು ಮಾತ್ರ ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಮೀಕ್ಷೆ ಬಗ್ಗೆ ಇಡೀ ರಾಜ್ಯವ್ಯಾಪಿ ಬಹುತೇಕ ಎಲ್ಲ ಜಾತಿ, ಸಮುದಾಯಗಳಿಂದ ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲವೆಂಬ ಮಾತು ಕೇಳಿಬರುತ್ತಿದೆ. ಮನೆ ಮನೆಗೂ ಸಂಪರ್ಕಿಸಿಲ್ಲ. ವರದಿಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ಬ್ರಾಹ್ಮಣ ಸಮುದಾಯದ ಜಾತಿಗಣತಿಯೂ ಅವೈಜ್ಞಾನಿಕವಾಗಿದೆ. ಇಂತಹ ವರದಿ ತೀವ್ರವಾಗಿ ವಿರೋಧಿಸುತ್ತೇವೆ. ವೈಜ್ಞಾನಿಕ, ವ್ಯವಸ್ಥಿತವಾಗಿ ಮತ್ತೊಮ್ಮೆ ಜಾತಿ ಜನಗಣತಿ ಕೈಗೊಳ್ಳಬೇಕು. ಕಾಂತರಾಜ ಆಯೋಗದ ವರದಿ ತಿರಸ್ಕರಿಸಬೇಕು. ಇದು ಬ್ರಾಹ್ಮಣ ಸಮಾಜ ಸೇವಾ ಸಂಘದ ಹಕ್ಕೊತ್ತಾಯವಾಗಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು. ಯಾವುದೇ ಕಾರಣಕ್ಕೂ ಅವೈಜ್ಞಾನಿಕ ವರದಿ ಮಂಡಿಸಿ, ಅಂಗೀಕರಿಸುವ ಕೆಲಸ ಆಗಬಾರದು ಎಂದು ಹೇಳಿದರು.
ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಏ.16ರಂದು ಸಿಇಟಿ ಪರೀಕ್ಷೆಗೆಂದು ಕೇಂದ್ರದೊಳಗೆ ತೆರಳುತ್ತಿದ್ದ ಬ್ರಾಹ್ಮಣ ವಿದ್ಯಾರ್ಥಿಗಳು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನೇ ತೆಗೆಸಿ ಹಾಕಿದ್ದು ಅಕ್ಷಮ್ಯ. ಬೀದರ್ ಪರೀಕ್ಷಾ ಕೇಂದರ್ದಲ್ಲಿ ಇದೇ ಕಾರಣಕ್ಕೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯದೇ, ಆತನ ಭವಿಷ್ಯವೇ ಮಂಕಾಗಿರುವುದು ದುರಂತ ಎಂದು ಶ್ರೀನಿವಾಸ ಭಟ್ ಹೇಳಿದರು.
ವರ್ಷಪೂರ್ತಿ ಕಷ್ಟಪಟ್ಟು, ಓದಿ ಸಿಇಟಿ ಮೂಲಕ ಬದುಕು, ಭವಿಷ್ಯ ಕಟ್ಟಿಕೊಳ್ಳಲು ಸಿದ್ಧವಾಗಿ ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ ಅಧಿಕಾರಿಗಳ ಕೃತ್ಯವು ಬ್ರಾಹ್ಮಣ ಹಾಗೂ ಹಿಂದು ವಿರೋಧಿ ಧೋರಣೆಯಾಗಿದೆ. ಈ ನಡೆಯನ್ನು ಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ದಾವಣಗೆರೆ ವಿಪ್ರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಮೊಘಲರು, ಬ್ರಿಟಿಷರು ಮಾಡುತ್ತಿದ್ದ ಇಂತಹ ಹೀನಕೃತ್ಯವು ಈಗಲೂ ಮುಂದುವರಿದಿದ್ದು ಕಳವಳಕಾರಿ ಸಂಗತಿ. ಧರ್ಮದ್ರೋಹಿ ಅಧಿಕಾರಿಗಳು ಎಷ್ಟೇ ಅವಮಾನಿಸಿದರೂ ಬ್ರಾಹ್ಮಣ ಸಮಾಜ ಪ್ರಾಣ ಪಣಕ್ಕಿಟ್ಟು, ಧರ್ಮರಕ್ಷಣೆ ಮಾಡಲಿದೆ. ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಲಿ ಎಂದು ತಾಕೀತು ಮಾಡಿದರು.
- - -
- ಪಿ.ಸಿ.ಶ್ರೀನಿವಾಸ ಭಟ್, ಯುವ ಮುಖಂಡ, ಬ್ರಾಹ್ಮಣ ಸಮಾಜ
- - --19ಕೆಡಿವಿಜಿ: ಹೊಸದಾಗಿ ಜಾತಿ ಜನಗಣತಿ ಕೈಗೊಳ್ಳುವಂತೆ ಒತ್ತಾಯಿಸಿ ಹಾಗೂ ಜನಿವಾರ ಬಿಚ್ಚಿಸಿದ ಘಟನೆ ಖಂಡಿಸಿ ದಾವಣಗೆರೆಯಲ್ಲಿ ಶನಿವಾರ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.