ಜೋಡಿ ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Apr 20, 2025, 01:50 AM IST
ಕ್ರೈಂ | Kannada Prabha

ಸಾರಾಂಶ

ಕೇರಳ ಕಾಸರಗೋಡಿನ ಚೆರ್ಕಳ ಮನೆಯ ಮೊಹಮ್ಮದ್ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರದ ಎ. ಮೊಹಮ್ಮದ್‌ ಇರ್ಷಾದ್‌ (24) ಹಾಗೂ ಎ. ಮೊಹಮ್ಮದ್ ಸಫ್ವಾನ್ (24) ಶಿಕ್ಷೆಗೀಡಾದ ಅಪರಾಧಿಗಳು. ನಾಫೀರ್‌ ಮತ್ತು ಫಹೀಮ್‌ ಕೊಲೆಯಾದವರು.

ಭಾರೀ ಕುತೂಹಲ ಕೆರಳಿಸಿದ್ದ ಪ್ರಕರಣ, ಮೂವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ಪ್ರಕಟ

ಕನ್ನಡಪ್ರಭ ವಾರ್ತೆ ಮಂಗಳೂರುಭಾರೀ ಕುತೂಹಲ ಕೆರಳಿಸಿದ್ದ, 2014ರಲ್ಲಿ ಅತ್ತಾವರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕೇರಳ ಕಾಸರಗೋಡಿನ ಚೆರ್ಕಳ ಮನೆಯ ಮೊಹಮ್ಮದ್ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರದ ಎ. ಮೊಹಮ್ಮದ್‌ ಇರ್ಷಾದ್‌ (24) ಹಾಗೂ ಎ. ಮೊಹಮ್ಮದ್ ಸಫ್ವಾನ್ (24) ಶಿಕ್ಷೆಗೀಡಾದ ಅಪರಾಧಿಗಳು. ನಾಫೀರ್‌ ಮತ್ತು ಫಹೀಮ್‌ ಕೊಲೆಯಾದವರು.ಏನಿದು ಪ್ರಕರಣ?:ನಾಫೀರ್ ಮತ್ತು ಫಹೀಮ್‌ ಗೆಳೆಯರಾಗಿದ್ದು, ನಾಫೀರ್‌ ವಿದೇಶದಿಂದ ತಂಡ ಚಿನ್ನದ ಗಟ್ಟಿಗಳನ್ನು ತಂದಿದ್ದ. ಇವುಗಳನ್ನು ಮಾರಾಟ ಮಾಡಲು ಮೂವರು ಆರೋಪಿಗಳು ಸಹಕರಿಸಿದ್ದರು. ಚಿನ್ನ ಮಾರಾಟ ಮಾಡಿ ಬಂದ ಹಣದ ವಿಚಾರದಲ್ಲಿ ನಫೀರ್ ಮತ್ತು ಫಹೀಮ್ ತಕರಾರು ಮಾಡಿದರು ಎಂಬ ದ್ವೇಷದಿಂದ ಮೂವರು ಆರೋಪಿಗಳು ಸೇರಿ 2014ರ ಜುಲೈ 1ರಂದು ಕೊಲೆ ಮಾಡಿದ್ದಾರೆ.ಶವ ಹೂಳಲು ಜಾಗ ಖರೀದಿಸಿದ್ದರು!:ಕೊಲೆ ಮಾಡಿ ಶವಗಳನ್ನು ಹೂತು ಹಾಕುವ ಉದ್ದೇಶದಿಂದ ಆರೋಪಿಗಳು ಕಾಸರಗೋಡಿನ ಬೇಡಡ್ಕ ಎಂಬಲ್ಲಿ 10 ಸೆಂಟ್ಸ್‌ ಜಾಗವನ್ನು 2014ರ ಮೇ 15ರಂದು ಖರೀದಿಸಿದ್ದು, 3ನೇ ಆರೋಪಿ ಸಫ್ಘಾನ್ ಹೆಸರಿಗೆ ನೊಂದಣಿ ಮಾಡಿಸಿಕೊಂಡಿದ್ದರು. ಶವ ಹೂಳಲು ದೊಡ್ಡ ಹೊಂಡವನ್ನೂ ತೆಗೆದಿಟ್ಟಿದ್ದರು. ಅದರ ಬಳಿಕ ಜೂ.16ರಂದು ಮೂವರು ಆರೋಪಿಗಳು ಮಂಗಳೂರು ಅತ್ತಾವರದ ಶ್ರೀ ಉಮಾಮಹೇಶ್ವರ ದೇವಸ್ಥಾನದ ಹಿಂಬದಿ ಮನೆಯೊಂದನ್ನು ಬಾಡಿಗೆಗೆ ಪಡೆದು, ಮರುದಿನ ನಫೀರ್ ಮತ್ತು ಫಹೀಮ್‌ರನ್ನು ಅಲ್ಲಿಗೆ ಕರೆದೊಯ್ದು ಅವರೊಂದಿಗೆ ಗೆಳೆತನದ ನಾಟಕವಾಡಿ ಎಲ್ಲರೂ ಜತೆಗೆ ವಾಸಿಸತೊಡಗಿದರು.2014ರ ಬೆಳಗ್ಗೆ 10.30ರಿಂದ 11 ಗಂಟೆ ಅವಧಿಯಲ್ಲಿ ಮೂವರು ಆರೋಪಿಗಳು ಸೇರಿ ಇಬ್ಬರನ್ನೂ ಕೊಲೆ ಮಾಡಿದ್ದಾರೆ.

ಠಾಣಾಧಿಕಾರಿ ದಿನಕ‌ರ್ ಶೆಟ್ಟಿ ತನಿಖೆ ಪೂರ್ಣಗೊಳಿಸಿ, ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಮೂವರೂ ಆರೋಪಿಗಳನ್ನು ದೋಷಿಗಳೆಂದು ಕೆಲ ದಿನಗಳ ಹಿಂದೆ ತಿಳಿಸಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.ಫಹೀಮ್‌ನನ್ನು ಕೊಂದದಕ್ಕಾಗಿ ಮೂವರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರು. ದಂಡ, ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಸಾದಾಸಜೆ, ನಫೀರ್‌ನನ್ನು ಕೊಂದದ್ದಕ್ಕಾಗಿ ಕೂಡ ಜೀವಾವಧಿ ಶಿಕ್ಷೆ ಮತ್ತು ತಲಾ 25,000 ರು. ದಂಡ, ದಂಡ ಪಾವತಿಸಲು ವಿಫಲರಾದಲ್ಲಿ 6 ತಿಂಗಳ ಸಾದಾಸಜೆ, ಕಲಂ 120(ಬಿ) ಭಾ.ದಂ.ಸಂ. ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರು. ದಂಡ, ದಂಡ ಪಾವತಿಸಲು ವಿಫಲರಾದರೆ 3 ತಿಂಗಳ ಸಾದಾ ಸಜೆ, ಕಲಂ 201 ಭಾ.ದಂ.ಸಂ. ಅಡಿಯಲ್ಲಿ 3 ವರ್ಷ ಸಾದಾಸಜೆ ಮತ್ತು ತಲಾ 5,000 ರು. ದಂಡ, ದಂಡ ಪಾವತಿಸಲು ವಿಫಲರಾದರೆ 2 ತಿಂಗಳ ಸಾದಾಸಜೆ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.

ಸರ್ಕಾರದ ಪರವಾಗಿ ಆಗಿನ ಸರ್ಕಾರಿ ಅಭಿಯೋಜಕ ರಾಜು ಪೂಜಾರಿ 14 ಸಾಕ್ಷಿದಾರರ ವಿಚಾರಣೆ ಮಾಡಿದ್ದು, ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ಅವರು ಉಳಿದ ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ