ಸಿಎಂ ಸಿದ್ದರಾಮಯ್ಯ ವಿಪಕ್ಷದಲ್ಲಿದ್ದಾಗ ಸಭಾಪತಿಗೆ ಅಪಮಾನ ಮಾಡಿದ್ದಾರೆ

KannadaprabhaNewsNetwork |  
Published : Mar 23, 2025, 01:31 AM IST
ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಹರಿಹರ ಮುಖಂಡ ಚಂದ್ರಶೇಖರ ಪೂಜಾರ ಇತರರು ಇದ್ದರು. | Kannada Prabha

ಸಾರಾಂಶ

ಸದನದಲ್ಲಿ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳ ಮೂಲಕ ಎತ್ತಿ ಹೊರ ಹಾಕಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆಯನ್ನೇ ಮಾಡಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸದನದಲ್ಲಿ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳ ಮೂಲಕ ಎತ್ತಿ ಹೊರ ಹಾಕಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆಯನ್ನೇ ಮಾಡಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್‌, ಮುಸ್ಲಿಂ ಮೀಸಲಾತಿ ವಿಚಾರವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ 18 ಜನ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳ ಮೂಲಕ ಸದನದಿಂದ ಹೊರ ಹಾಕಿಸಿ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದರು. ಹಿರಿಯ ಸಚಿವರ ಕುರಿತಂತೆ ಹನಿಟ್ರ್ಯಾಪ್ ಚರ್ಚೆಯಾಗಿ, ತನಿಖೆಗೆ ಆದೇಶ ಆಗಬೇಕಾಗಿತ್ತು. ಆದರೆ, ಶಾಸಕರ ಗೌರವಕ್ಕೆ ಧಕ್ಕೆ ಮಾಡಲಾಗಿದೆ. ಪ್ರಭಾವಿ ಸಚಿವರ ಹನಿಟ್ರ್ಯಾಪ್‌ ಆದರೆ ಸಾಮಾನ್ಯರ ಗತಿ ಏನು?. ಬಿಜೆಪಿ ಶಾಸಕರನ್ನು ಸದನದಿಂದ ಮಾರ್ಷಲ್‌ಗಳನ್ನು ಬಳಸಿ ಹೊರ ಹಾಕಿಸಿದ ಸರ್ಕಾರದ ನಡೆಯನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಏನು ಗೂಂಡಾಗಿರಿ ಮಾಡೇ ಇಲ್ವಾ? ನಮ್ಮ ಸರ್ಕಾರವಿದ್ದಾಗ ಸಿದ್ದರಾಮಯ್ಯ ವೀರಾವೇಶದಿಂದಲೇ ಗೂಂಡಾಗಿರಿ ಮಾಡಿದ್ದರು. ಇವರು ವಿಪಕ್ಷದಲ್ಲಿದ್ದಾಗ ಸಭಾಪತಿಗಳಿಗೆ ಎಷ್ಟು ಸಲ ಅಪಮಾನ ಮಾಡಿದ್ದಾರೆ. ಅದನ್ನೆಲ್ಲಾ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನವರು ಮರೆತ್ತಿದ್ದಾರಾ ಎಂದು ಪ್ರಶ್ನಿಸಿದರು.

ಹನಿ ಟ್ರ್ಯಾಪ್‌ ಸಿಡಿ ಕೇಸ್‌ನ್ನೇ ಕಾಂಗ್ರೆಸ್ ಸರ್ಕಾರದವರು ತಿಪ್ಪೆ ಸಾರಿಸುತ್ತಾರೆ. ಹನಿಟ್ರ್ಯಾಪ್ ಆಗಿರುವವರು ಈ ಬಗ್ಗೆ ಹೇಳಬೇಕು. ಮಧುಬಲೆ( ಹನಿಟ್ರ್ಯಾಪ್) ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ನಾವು ಒತ್ತಾಯಿಸುತ್ತೇವೆ. ಸದನದಲ್ಲಿ ಹನಿಟ್ರ್ಯಾಪ್ ಪ್ರಕರಣ, ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಿರುವುದು ಸರಿಯಲ್ಲ. ಇದನ್ನು ಪ್ರಶ್ನಿಸಿದ ಬಿಜೆಪಿಯ 18 ಶಾಸಕರನ್ನು ಸದನದಿಂದ ಹೊರ ಹಾಕಿಸಿ, 6 ತಿಂಗಳು ಸಸ್ಪೆಂಡ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ಮಸೂದೆಯು ಸದನದಲ್ಲಿ ಚರ್ಚೆಯೇ ಆಗದೆ ಮಂಡನೆಯಾಗಿದೆ. ಸುಲಭವಾಗಿ ಬಿಲ್ ಪಾಸ್ ಮಾಡಲು ಹೀಗೆ ಮಾಡಿದ್ದಾರೆ. ಈ ಮೂಲಕ ಶಾಸಕಾಂಗಕ್ಕೆ ಅವಮಾನ ಮಾಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮುಸ್ಲಿಮ್‌ ಗುತ್ತಿಗೆ ಮೀಸಲು ರದ್ಧುಪಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಇನ್ನೂ ಐಸಿಯು ವಾರ್ಡ್‌ನಲ್ಲೇ ಇದೆ. ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದರು. ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸಲಾಗಿದೆ. ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲು ನೀಡಿರುವುದನ್ನೇ ರದ್ದುಪಡಿಸುತ್ತೇವೆ.ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ