ಗಂಗಾವತಿ : ನಾನು ಗಂಗಾವತಿ ಕ್ಷೇತ್ರದ ಶಾಸಕನಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವೇ ಕಾರಣವಾಗಿದೆ ಎಂದು ಹೇಳುವ ಮೂಲಕ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಚ್ಚರಿ ಮೂಡಿಸಿದರು.
ನಗರದ ಕನಕಗಿರಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಚುನವಾಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಪರಾಭವಗೊಂಡು ಹತಾಶರಾಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರನ್ನು ರೆಡ್ಡಿ ಬುಕ್ ಮಾಡಿಕೊಂಡಿದ್ದಾರೆ ಎಂದು ಭಾಷಣದಲ್ಲಿ ಮಾತನಾಡುತ್ತಿದ್ದಾರೆ. ಆದರೆ ಅವರಿಗೆ ಅಸಲಿ ವಿಷಯ ಗೊತ್ತಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನಗೆ ಬೆಂಬಲಿಸಿದ್ದಾರೆ ಎಂದರು.
ಆ ಕಾರಣದಿಂದಲೇ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅನ್ಸಾರಿ ಆಯೋಜಿಸಿದ್ದ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿಲ್ಲ. ಇದು ಎಲ್ಲರಿಗೂ ಗೊತ್ತಿದ್ದ ವಿಷಯ. ನಾನು ಗೆದ್ದರೆ 10 ಶಾಸಕರು ತಮಗೆ ಬೆಂಬಲ ವ್ಯಕ್ತ ಪಡಿಸುತ್ತಾರೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ನನ್ನ ಗೆಲುವಿಗೆ ಬೆಂಬಲಿಸಿದ್ದಾರೆ ಎಂದರು.
ಅನ್ಸಾರಿ ಅವರು ತಾವು ಅಧಿಕಾರದಲ್ಲಿದ್ದ ಸಂದರ್ಭ ಕ್ಷೇತ್ರದಲ್ಲಿ 20 ಸಾವಿರ ಮನೆ ತಂದಿದ್ದೇನೆ ಎಂದಿದ್ದಾರೆ. 20 ಸಾವಿರ ಮನೆಗಳು ತಂದಿದ್ದರೆ ನಾನು ಶಾಸಕ ಆಗುತ್ತಿರಲಿಲ್ಲ. ಅವರೇ ಶಾಸಕರಾಗುತ್ತಿದ್ದರು. ಆ 20 ಸಾವಿರ ಮನೆಗಳು ಎಲ್ಲಿ ಹೋದವು ಎಂಬುದನ್ನು ಅನ್ಸಾರಿಯೇ ಹೇಳಬೇಕೆಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಸಿಂಗನಾಳ ವಿರೂಪಾಕ್ಷಪ್ಪ, ಎಚ್.ಎಂ. ಸಿದ್ದರಾಮಸ್ವಾಮಿ ಇತರರು ಇದ್ದರು.