ನಾರಾಯಣ ಹೆಗಡೆ
ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇರುವುದರಿಂದ ಈ ಸಲ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿ ತಮ್ಮ ಕ್ಷೇತ್ರಗಳಿಗೆ ಹೊಸ ಯೋಜನೆ, ಅನುದಾನ ತರುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹ ಯಾವುದೇ ಪ್ರಮುಖ ಯೋಜನೆಗಳು ಘೋಷಣೆಯಾಗಿಲ್ಲ. ಕೃಷಿ ಆಧರಿತ ಕೈಗಾರಿಕೆ, ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕವಾಗುವಂತಹ ಯೋಜನೆ, ನೀರಾವರಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿಲ್ಲ. ಬಜೆಟ್ ಬಗ್ಗೆ ಇಟ್ಟುಕೊಂಡಿದ್ದ ಭಾರಿ ನಿರೀಕ್ಷೆ ಇದರಿಂದ ಹುಸಿಯಾಗಿದೆ.
ಜಿಲ್ಲೆಗೆ ಸಿಕ್ಕಿದ್ದೇನು?: ಕಾಗಿನೆಲೆ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳಿಗೆ ₹34 ಕೋಟಿ ಅನುದಾನ ಒದಗಿಸಲಾಗಿದೆ. ಬ್ಯಾಡಗಿ ಮೆಣಸಿನಕಾಯಿ ತಳಿ ಸಂರಕ್ಷಣೆ ಮತ್ತು ಎಲೆ ಮುಟುರು ರೋಗ, ತ್ರಿಪ್ಸ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಸವಣೂರು ತಾಲೂಕು ಆಸ್ಪತ್ರೆ ನವೀಕರಣಗೊಳಿಸುವುದು. ಸವಣೂರು ಸೇರಿದಂತೆ ವಿವಿಧ ಆಸ್ಪತ್ರೆಗಳ ನವೀಕರಣಕ್ಕೆ ₹650 ಕೋಟಿ ಅನುದಾನ ನೀಡಲಾಗಿದೆ. ಆದರೆ, ಇದರಲ್ಲಿ ಸವಣೂರು ಆಸ್ಪತ್ರೆಗೆ ಎಷ್ಟು ಅನುದಾನ ಸಿಗುತ್ತದೆ ಎಂಬುದು ತಿಳಿಯಬೇಕಿದೆ.ಉದ್ಯೋಗ ಸೃಜನೆಯೊಂದಿಗೆ ಆರ್ಥಿಕ ಪ್ರಗತಿ ಸಾಧಿಸಲು ರಾಣಿಬೆನ್ನೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಹಿರೇಕೆರೂರಿನ ಸರ್ವಜ್ಞ ಕೆರೆ ಹಾಗೂ ಹಾನಗಲ್ಲ ತಾಲೂಕಿನ ಹಿರೇಕೌಂಶಿ ಕೆರೆ ತುಂಬಿಸುವ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ವಾಹನ ಸಂಚಾರ ಮೇಲ್ವಿಚಾರಣೆ ಮಾಡಲು ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 60 ಸ್ಥಳಗಳಲ್ಲಿ ₹50 ಕೋಟಿ ವೆಚ್ಚದಲ್ಲಿ ಎಐ ಆಧರಿತ ವಿದ್ಯುನ್ಮಾನ ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ವಹಿಸಲಾಗಿದೆ.
ಬೇಡಿಕೆ ಏನಿತ್ತು?: ಜಿಲ್ಲೆಯ ರೈತರ ಬೇಡಿಕೆಯಾದ ವರದಾ- ಬೇಡ್ತಿ ನದಿ ಜೋಡಣೆ ಬಗ್ಗೆಯೂ ಚಕಾರ ಎತ್ತಿಲ್ಲ. ಮುಚ್ಚುವ ಭೀತಿ ಎದುರಾಗಿರುವ ಹಾವೇರಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಮೀಸಲಿಟ್ಟಿಲ್ಲ. ರಾಜ್ಯ ಸರ್ಕಾರದ ಈ ನಡೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದಲ್ಲದೇ ತುಂಗಭದ್ರಾ ನದಿಗೆ ಹಾವನೂರು- ಶಾಖಾರ ಮಧ್ಯೆ ಬ್ರಿಡ್ಜ್ ಕಂ ಬ್ಯಾರೇಜ್, ನೀರಾವರಿ ಯೋಜನೆಗಳಿಗೆ ಅನುದಾನ, ಎಂಜಿನಿಯರಿಂಗ್ ಕಾಲೇಜಿನ ಪುನಶ್ವೇತನ, ಹಾವೇರಿ ನಗರಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಅನುದಾನ, ವರದಾ ನದಿ ಬ್ರಿಡ್ಜ್‌ಗಳ ನವೀಕರಣ ಸೇರಿದಂತೆ ಹಲವಾರು ನಿರೀಕ್ಷೆಗಳು ಹುಸಿಯಾಗಿವೆ. ಶಿಶುವಿನಹಾಳದ ಶರೀಫಗಿರಿ, ರಾಣಿಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಬಂಕಾಪುರದ ನವಿಲುಧಾಮ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಸ್ಥಳಗಳಲ್ಲಿ ಹೆಚ್ಚಿನ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂಬ ಬೇಡಿಕೆಯಿತ್ತು. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿತ್ತು.
ಹಾವೇರಿ ನಗರಕ್ಕೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಕಂಚಾರಗಟ್ಟಿ ಬಳಿಯಲ್ಲಿರುವ ಕುಡಿಯುವ ನೀರಿನ ಜಾಕವೆಲ್ ಬಳಿಯಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಸಿಗುವ ವಿಶ್ವಾಸವನ್ನು ಶಾಸಕರೇ ವ್ಯಕ್ತಪಡಿಸಿದ್ದರು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕಿತ್ತು.