ಬೀದರ್‌ಗಿಂದು ಸಿಎಂ ಆಗಮನ; ಭರ್ಜರಿ ತಯಾರಿ

KannadaprabhaNewsNetwork | Published : Apr 16, 2025 12:33 AM

ಸಾರಾಂಶ

ಇಂದು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಳ್ಳಲಿದ್ದು , ಸುಮಾರು 2025ಕೋಟಿ ರು.ಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ, ಬೀದರ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.16ರಂದು ಬುಧವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು ಸುಮಾರು 2025ಕೋಟಿ ರು.ಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿರುವ ಹಿನ್ನಲೆಯಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಭರಭೂರ ತಯಾರಿ ನಡೆದಿದ್ದು, 30 ಸಾವಿರ ಜನ ಸೇರುವರು ಎಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿಗಳು ಅಂದು ಮಧ್ಯಾಹ್ನ 3.45ಕ್ಕೆ ಕಲಬುರಗಿ ವಿಶೇಷ ವಿಮಾನದ ಮೂಲಕ ಹೊರಟು ಸಂಜೆ 4ಕ್ಕೆ ಬೀದರ್‌ ಏರ್ಬೇಸ್‌ಗೆ ಆಗಮಿಸುವರು. ಬೀದರ್‌ನಿಂದ ಬೆಂಗಳೂರಿಗೆ ಪುನಾರಂಭ ಕಂಡಿರುವ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಬೀದರ್‌ ವಿಮಾನ ನಿಲ್ದಾಣದ ಹೊರಗೆ ಏ. 17ರಂದು ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣಿಸುವ 5 ಆಯ್ದ ಪ್ರಯಾಣಿಕರಿಗೆ ಬೋರ್ಡಿಂಗ್‌ ಪಾಸ್‌ ನೀಡಲಿದ್ದಾರೆ.ನಂತರ 4.10ಕ್ಕೆ ಬೀದರ್‌ ವಿಮಾನ ನಿಲ್ದಾಣ ಹೊರಗೆ (ವೇದಿಕೆಯ ಬಳಿ) ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

ಸಂಜೆ 4.45ಕ್ಕೆ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ ಬೀದರ್‌ ವತಿಯಿಂದ ಆಯೋಜಿಸಿರುವ 2025 ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 7.30ಕ್ಕೆ ಜಿಲ್ಲಾ ನೆಹರು ಕ್ರೀಡಾಂಗಣದಿಂದ ಹೊರಟು 7.40ಕ್ಕೆ ಬೀದರ್‌ ವಿಮಾನ ನಿಲ್ದಾಣಕ್ಕೆ ತೆರಳಿ ಬಸವಕಲ್ಯಾಣ ಅಭಿವರದ್ಧಿ ನಿಗಮದ ಸಭೆ ನಡೆಸಲಿದ್ದಾರೆ. ನಂತರ ಸಂಜೆ 8.30ಕ್ಕೆ ಬೀದರ್‌ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಭೂರಿ ಭೋಜನ ತಯಾರಿ :

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ನೆಹರು ಕ್ರೀಡಾಂಗಣ, ಬೀದರ್‌ ವಿಮಾನ ನಿಲ್ದಾಣಗಳ ಸ್ಥಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹಿರಿಯ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು. ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ತಯಾರಿಸಲಾಗುತ್ತಿರುವ ಭೋರಿ ಭೋಜನದೊ ಜೊತೆಗೆ ಸಿಹಿ ಸವಿಯಲು ಲಾಡು ತಯಾರಿಸಲಾಗುತ್ತಿದೆ.ಬಂದೋಬಸ್ತ್‌ಗೆ 2ಸಾವಿರ ಪೊಲೀಸ್‌ :

ಸಿಎಂ ಅವರ ಕಾರ್ಯಕ್ರಮದ ಬಂದೋಬಸ್ತ್‌ಗಾಗಿ ಸುಮಾರು 2ಸಾವಿರ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.ಮಂಗಳವಾರ ಎಸ್‌ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಪ್ರತಿಕ್ರಿಯಿಸಿ, 1300 ಪೊಲೀಸ್‌ ಕಾನ್ಸ್‌ಟೇಬಲ್‌, 400 ಹೋಂ ಗಾರ್ಡ್‌, 150 ಜನ ಪೊಲೀಸ್‌ ಅಧಿಕಾರಿಗಳು, 4ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಸುಮಾರು 2ಸಾವಿರ ಪೊಲೀಸರು ಸಿಎಂ ಕಾರ್ಯಕ್ರಮದ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

----

₹2025 ಕೋಟಿ ಕಾಮಗಾರಿ ಸುಳ್ಳಿನ ಕಂತೆ: ಕಾರ್ಯಕ್ರಮ ಬಿಜೆಪಿ ಬಹಿಷ್ಕಾರ

ಬೀದರ್‌: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏ‌.16ರಂದು ಜಿಲ್ಲೆಗೆ ಆಗಮಿಸಿ ಸುಮಾರು 2025 ಕೋಟಿ ರು.ಗಳ ವಿವಿಧ‌‌ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಉದ್ಘಾಟನೆ ಮಾಡಲಿದ್ದಾರೆ ಎಂಬುದೆಲ್ಲ ಬರೀ ಸುಳ್ಳಿನ ಕಂತೆಯಾಗಿದೆ. ಇದು ಜಿಲ್ಲೆಯ ಜನರಿಗೆ ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಮಹಾ ಮೋಸವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಲು ಬಿಜೆಪಿ ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ಪಕ್ಷ ತಿಳಿಸಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏ.16ರಂದು 2025 ಕೋಟಿ ರೂ. ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನೀಡಿದ ಹೇಳಿಕೆ ನೋಡಿ ಅಚ್ಚರಿಯಾಗಿದೆ. ಇಲ್ಲಿ ವಿವಿಧ ಕಾಮಗಾರಿಗಳ ಅನುದಾನ ಕೇಂದ್ರ ಸರ್ಕಾರದ್ದು ಎಷ್ಟು ಪಾಲು, ರಾಜ್ಯ ಸರ್ಕಾರದ್ದು ಎಷ್ಟು ಪಾಲು ಎನ್ನುವದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಇನ್ನು ಅನೇಕವು ಹಿಂದಿನ ಸಾಲಿನ ಕಾಮಗಾರಿ, ಯೋಜನೆಗಳನ್ನು ಮತ್ತೆ ಪ್ರಸ್ತಾಪಿಸಲಾಗಿದೆ. ಖುದ್ದು ಈ ಹಿಂದೆ ಸಿದ್ಧರಾಮಯ್ಯ ಅವರೇ ಶಂಕುಸ್ಥಾಪನೆ ಮಾಡಿದ ಕಾಮಗಾರಿಯನ್ನು ಮತ್ತೊಮ್ಮೆ ಈಗ ಶಂಕುಸ್ಥಾಪನೆ ಮಾಡಲಾಗುತ್ತಿ ರುವುದು ಹಾಸ್ಯಾಸ್ಪದ ಎನಿಸಿದೆ.ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರ್ಕಾರ ಅಗ್ಗದ ಪ್ರಚಾರಕ್ಕಾಗಿ ಹೀಗೆ ಸುಳ್ಳಿನ ನೆರವು ಪಡೆಯುತ್ತಿದೆ. ಹೀಗಾಗಿ ಈ ಕಾರ್ಯಕ್ರಮದಿಂದ ದೂರವಿರಲು ನಿರ್ಧರಿಸಿದ್ದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ, ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್‌, ಮಾಜಿ ಸಚಿವರಾದ ಔರಾದ್‌ ಶಾಸಕ ಪ್ರಭು ಚವ್ಹಾಣ್‌, ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್‌ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್‌ ಸದಸ್ಯರಾದ ಶಶೀಲ್ ನಮೋಶಿ, ಮಾರುತಿರಾವ ಮೂಳೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article