ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಹಾಲು ಒಕ್ಕೂಟದ ೨೫೦ ಕೋಟಿ ರು.ಗಳ ವೆಚ್ಚದ ಎಂವಿಕೆ ಡೇರಿ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಮುಂಬರುವ ಜನವರಿ ೧೫ ಅಥವಾ ೧೯ರಂದು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಕೋಮುಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕೂಟದಲ್ಲಿ ಸ್ಥಾಪಿಸಿರುವ ಸೌರ ವಿದ್ಯುತ್ ಘಟಕದಿಂದ ಪ್ರತಿಮಾಸ ೪ ಲಕ್ಷ ಯುನಿಟ್ ಉತ್ಪಾದನೆ ಆಗುತ್ತಿದ್ದು, ಇದರ ಮೂಲಕ ಒಕ್ಕೂಟಕ್ಕೆ ನೇರವಾಗಿ ೮೦ ಲಕ್ಷ ರು.ಗಳ ಉಳಿತಾಯವಾಗುತ್ತಿದೆ. ಬೆಸ್ಕಾಂರಿಂದ ವಿದ್ಯುತ್ ಮೀಟರ್ ಅನುಮೋದನೆ ದೊರಕಿದ ನಂತರ ಉಳಿತಾಯದ ಮೊತ್ತ ತಿಂಗಳಿಗೆ ೧.೫ ಕೋಟಿ ರೂ. ಆಗಲಿದೆ ಎಂದರು.
ಕೋಮುಲ್ ಎಲ್ಲಿಯೂ ಸಾಲದಲ್ಲಿ ಇಲ್ಲ. ಹೆಚ್ಚು ಬೇಡಿಕೆಯಿರುವ ನಂದಿನ ಉತ್ಪನ್ನಗಳನ್ನು ಕೋಲಾರದಲ್ಲೇ ಉತ್ಪಾದಿಸಲು ತಯಾರಿಕಾ ಘಟಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ. ಕೆಎಎಫ್ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯಾಗಿದ್ದು, ಡಿ.ಕೆ.ಸುರೇಶ್ ಮತ್ತು ಬೈರತಿ ಸುರೇಶ್ ಸೇರಿದಂತೆ ನಾಯಕರು ಬೆಂಬಲವಿದೆ ಎಂದು ಅವರು ಹೇಳಿದರು.
ಮಾಲೂರಿನಲ್ಲಿ ಕಾಂಗ್ರೆಸ್ ಇಲ್ಲದಾಗ ಪಕ್ಷವನ್ನು ಕಟ್ಟಿದ್ದು ನಾನು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರು ಉತ್ತಮ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸುಮಾರು ೧೦ ಸಾವಿರ ಹಕ್ಕುಪತ್ರ ವಿತರಿಸಲು ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಿಎಂ ಆಗಮಿಸಲಿದ್ದಾರೆ ಎಂದು ನಂಜೇಗೌಡ ತಿಳಿಸಿದರು.ಯಾವುದೇ ವೈಮನಸ್ಸು ಇಲ್ಲಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಮ್ಮ ಪಕ್ಷದವರು, ನಾವಿಬ್ಬರೂ ಅಣ್ಣ ತಮ್ಮಂದಿರು ಇದ್ದಂತೆ, ಒಕ್ಕೂಟಕ್ಕೆ ಅವರು ಹೊಸಬರು, ಹಲವು ಅನುಮಾನಗಳಿದ್ದವು, ಅದಕ್ಕಾಗಿ ಮಾತನಾಡುತ್ತಿದ್ದರು, ನಂತರ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ, ಅದಕ್ಕೆ ಸಮಯ ಬೇಕಾಗುತ್ತರದೆ, ನಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದರು. ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಅವರು, ಸಿಎಂ ವಿಚಾರವಾಗಿ ಯಾರೂ ಮಾತನಾಡಬಾರದೆಂದು ಹೈಕಮಾಂಡ್‌ನ ಸ್ಪಷ್ಟ ಸೂಚನೆ ನೀಡಿದೆ, ಸಿದ್ದರಾಮಯ್ಯ ಅಥವಾ ಡಿಕೆಶಿ ಪರವಾಗಿ ಹಲವರಿದ್ದಾರೆ. ಆದರೆ ಯತೀಂದ್ರ ಈ ವಿಷಯದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಸಿಎಂ ಮಗನಾಗಿದ್ದು ಮನೆಯಲ್ಲಿ ಆರಾಮವಾಗಿರಬೇಕು, ಸಿದ್ದರಾಮಯ್ಯ ರಾಜ್ಯದ ಪ್ರಮುಖ ನಾಯಕರು, ಅವಕಾಶ ಸಿಕ್ಕರೆ ರಾಷ್ಟ್ರಮಟ್ಟದ ನಾಯಕರಾಗುವ ಸಾಮರ್ಥ್ಯ ಅವರಲ್ಲಿದೆ ಎಂದರು.