ಕನ್ನಡಪ್ರಭ ವಾರ್ತೆ ಮೈಸೂರುಪತ್ರಕರ್ತರು ಇಲ್ಲದಿದ್ದರೇ ಕ್ಷೇತ್ರದಲ್ಲಿ ಹಲವು ಸಾಧನೆಗಳು ಆಗುತ್ತಿರಲಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.ನಗರದ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘವು ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಅನನುಭವಿ ಆಗಿದ್ದೆ. ಆ ವೇಳೆ ಪತ್ರಕರ್ತರು ನೀಡಿದ ಉಪಯುಕ್ತ ಸಲಹೆ, ಮಾರ್ಗದರ್ಶನವು ಇಂದು ನಾನು ಏನಾದರೂ ಸಾಧನೆ ಮಾಡಲು ಸಾಧ್ಯವಾಗುವಂತೆ ಮಾಡಿದೆ. ಕ್ಷೇತ್ರದ ಜನತೆಗೆ ಯೋಜನೆ ಜಾರಿಗೊಳಿಸಲು, ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುವ ವೇಳೆ ಅವರ ಧ್ವನಿಯಾಗಿ ಮಾಧ್ಯಮಗಳು ನಿಂತು ಲೋಪದೋಷ ಸರಿಪಡಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದೆ ಎಂದು ಅವರು ಹೇಳಿದರು.ಅಲ್ಲದೆ, ಮೈಸೂರು- ಕೊಡಗು ಹೆದ್ದಾರಿ, ರೈಲ್ವೆ ಮಾರ್ಗ, ಯಾದವಗಿರಿಯಲ್ಲಿ ಹೊಸ ರೈಲು ನಿಲ್ದಾಣ, ಭಾರತೀಯ ಭಾಷಾ ಸಂಸ್ಥಾನದಿಂದ ಕನ್ನಡಕ್ಕಾಗಿನ ಪ್ರತ್ಯೇಕ ಅಧ್ಯಯನ ವ್ಯವಸ್ಥೆ ಬೇರ್ಪಡಿಸಿ ಅಧ್ಯಯನ ವಿಸ್ತೃತಗೊಳಿಸುವುದು, ಕ್ಷೇತ್ರದಲ್ಲಿ ವಿಶೇಷಚೇತನರಿಗೆ ಸವಲತ್ತು ವಿತರಣೆ ಮೊದಲಾದ ಕಾರ್ಯಗಳು ಸಾಧ್ಯವಾಗುತ್ತಿವೆ ಎಂದರು.ಪತ್ರಕರ್ತ ಎ. ಹರಿಪ್ರಸಾದ್ ಮಾತನಾಡಿ, ಮಾಧ್ಯಮಗಳು ಸದಾ ಜನಪರವಾಗಿ ಧ್ವನಿಯೆತ್ತಬೇಕು. ಸರ್ಕಾರಕ್ಕೆ ಕಿರಿಕಿರಿ ಆಗುತ್ತದೆಂಬ ಕಾರಣದಿಂದಾಗಿ ಟೀಕಿಸುವುದನ್ನು ಬಿಡಬಾರದು. ಮಾಧ್ಯಮಗಳ ಧ್ವನಿ ಕೇವಲ ಜನಪರ ಮಾತ್ರವೇ ಆಗಿರಬಾರದು, ಜೀವಪರವೂ ಆಗಿರಬೇಕು ಎಂದು ತಿಳಿಸಿದರು.ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕಾನಾಥ್ ಮಾತನಾಡಿ, ಮೈಸೂರು ಪತ್ರಿಕೋದ್ಯಮ ಕೂಡು ಕುಟುಂಬವಿದ್ದಂತೆ, ಇಲ್ಲಿ ವಿಭಿನ್ನವಾದ ಸವಾಲುಗಳಿವೆ. ಆದರೂ ಇತರರಿಗೆ ಆದರ್ಶವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.ಶಾಸಕ ಜಿ.ಟಿ. ದೇವೇಗೌಡ, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಉಪಾಧ್ಯಕ್ಷ ರವಿ ಪಾಂಡವಪುರ ಮೊದಲಾದವರು ಇದ್ದರು.----ಬಾಕ್ಸ್...- ಹಿರಿಯ ಪತ್ರಕರ್ತರಿಗೆ ಅಭಿನಂದನೆ-ಇದೇ ವೇಳೆ ಜಸ್ಟ್ ಕನ್ನಡ ಸುದ್ದಿ ಸಂಸ್ಥೆಯ ಪ್ರಧಾನ ಸಂಪಾದಕ ವಿ. ಮಹೇಶ್ ಕುಮಾರ್, ಗ್ರಾಮೀಣ ಭಾಗದಿಂದ ಆಂದೋಲನ ದಿನಪತ್ರಿಕೆಯ ಹಿರಿಯ ವರದಿಗಾರ ಟಿ.ಎ. ಸಾದಿಕ್ ಪಾಷ, ವರ್ಷದ ಹಿರಿಯ ಉಪ ಸಂಪಾದಕರಾಗಿ ವಿಜಯ ಕರ್ನಾಟಕ ಪತ್ರಿಕೆಯ ಕೆ.ಎಸ್. ಮಂಜುನಾಥಸ್ವಾಮಿ, ಹಿರಿಯ ಛಾಯಾಗ್ರಾಹಕರಾಗಿ ಇಂಡಿಯನ್ ಎಕ್ಸ್ ಪ್ರೆಸ್ ಉದಯಶಂಕರ್, ದೃಶ್ಯ ಮಾಧ್ಯಮ ವಿಭಾಗದಿಂದ ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಸಿ.ಎಂ. ಮಧುಸೂದನ್, ಟಿವಿ9 ಛಾಯಾಗ್ರಾಹಕ ಪ್ರಮೋದ್ ಪ್ರಭು, ಟಿಎನ್ಐಟಿ ಪ್ರಶಸ್ತಿಗೆ ಭಾಜನರಾದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ರವಿ ಪಾಂಡವಪುರ ಮತ್ತು ಟಿವಿ9 ಜಿಲ್ಲಾ ವರದಿಗಾರ ರಾಮ್ ಅವರನ್ನು ಅಭಿನಂದಿಸಲಾಯಿತು. 7 ಮಂದಿಗೆ ವಾರ್ಷಿಕ ಪ್ರಶಸ್ತಿಈ ಸಾಲಿನ ಅತ್ಯುತ್ತಮ ಕನ್ನಡ ವರದಿಗಾರಿಕೆ ಪ್ರಶಸ್ತಿಗೆ ಆಂದೋಲನ ದಿನಪತ್ರಿಕೆ ದಾ.ರಾ. ಮಹೇಶ್, ಇಂಗ್ಲಿಷ್ ವರದಿಗಾರಿಕೆಗೆ ಸ್ಟಾರ್ ಆಫ್ ಮೈಸೂರ್ ಪತ್ರಿಕೆ ವರದಿಗಾರ ಎ. ಗಣೇಶ್, ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಎಸ್.ಆರ್. ಮಧುಸೂದನ್, ದೃಶ್ಯ ಮಾಧ್ಯಮ ವಿಭಾಗದಲ್ಲಿ ನ್ಯೂಸ್18 ವಾಹಿನಿಯ ಕೆ.ಎಸ್. ಆನಂದ ಮತ್ತು ವಿಡಿಯೋಗ್ರಾಫರ್ ಪಿ. ರಾಹುಲ್ ಹಾಗೂ ಇಂಡಿಯನ್ ಟಿವಿ ವರದಿಗಾರ ಚಂದನ್ ಬಲರಾಮ ಮತ್ತು ವಿಡಿಯೋಗ್ರಫರ್ ಎಲ್. ಸತೀಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.----ಕೋಟ್...ನಾವು ನಗರದ ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಅದು ಮೈಸೂರು ಪರಂಪರೆ, ಹಿತಾಸಕ್ತಿಗೆ ಅನುಗುಣವಾಗಿರಬೇಕು. ಜನರ ಜೀವನ ಸುಧಾರಣೆಯೇ ಮುಖ್ಯ. ವಿಕಸಿತ ಭಾರತದಂತೆ ಮೈಸೂರು, ಕೊಡಗು ಸಹ ವಿಕಸಿತ ಕ್ಷೇತ್ರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳೂ ಉಪಯುಕ್ತ ಸಲಹೆ ಮೂಲಕ ಬೆಂಬಲಕ್ಕೆ ನಿಲ್ಲಬೇಕು.- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರು----ಮೈಸೂರು ಭಾಗದ ಪತ್ರಿಕಾರಂಗ ದೇಶಾದ್ಯಂತ ಹೆಸರು ಮಾಡಿದೆ. ಅನೇಕ ದಿಗ್ಗಜರು ಇಲ್ಲಿ ಬಂದು ಹೋಗಿದ್ದಾರೆ. ಹೀಗಾಗಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಬಾರದು. ಬೇಕಾದರೆ ಯಾರಿಗಾದರೂ ಒಳಿತಾಗುವ ಕೆಲಸ ಮಾಡಲಿ, ಮಾಡದೆಯೂ ಇರಲಿ. ಆದರೆ, ಈ ಕಾರಣದಿಂದಾಗಿ ಮನಸ್ಸಿಗೆ ನೋವುಂಟು ಮಾಡುವ ಕೆಲಸ ಮಾಧ್ಯಮಗಳು ವೃಥಾ ಮಾಡುವುದು ಬೇಡ.- ಜಿ.ಟಿ. ದೇವೇಗೌಡ, ಶಾಸಕರು