ಮತದಾರರ ಗುರುತು ಚೀಟಿ, ಆಧಾರ್ ವಂಚನೆ ತಡೆಗೆ ಸಿಎನ್‌ಸಿ ಆಗ್ರಹ

KannadaprabhaNewsNetwork |  
Published : Jun 05, 2026, 02:45 AM IST
ಚಿತ್ರ : 4ಎಂಡಿಕೆ1 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿಂದ ಮನವಿ ಸಲ್ಲಿಕೆ.  | Kannada Prabha

ಸಾರಾಂಶ

ಅಕ್ರಮ ಮತದಾರರ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ವಿಶೇಷ ತೀವ್ರ ಪರಿಷ್ಕರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಸ್ಥಳೀಯ ಆದಿಮಸಂಜಾತ ಕೊಡವರ ಚುನಾವಣಾ ಹಕ್ಕುಗಳ ರಕ್ಷಣೆ ಮಾಡಬೇಕು. 2027ರ ಜನಗಣತಿ ಹಾಗೂ ರಾಷ್ಟ್ರೀಯ ಜಾತಿ ಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಒದಗಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಕ್ರಮ ಮತದಾರರ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ವಿಶೇಷ ತೀವ್ರ ಪರಿಷ್ಕರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಸ್ಥಳೀಯ ಆದಿಮಸಂಜಾತ ಕೊಡವರ ಚುನಾವಣಾ ಹಕ್ಕುಗಳ ರಕ್ಷಣೆ ಮಾಡಬೇಕು. 2027ರ ಜನಗಣತಿ ಹಾಗೂ ರಾಷ್ಟ್ರೀಯ ಜಾತಿ ಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಒದಗಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿತು.ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮತದಾರರ ಪಟ್ಟಿಯಲ್ಲಿ ಸಂಶಯಾಸ್ಪದ ಪೌರತ್ವ ಹೊಂದಿರುವವರನ್ನು ಸೇರ್ಪಡೆಗೊಳಿಸುತ್ತಿರುವುದರಿಂದ ಕೊಡವ ಭೂಮಿಯು ದೊಡ್ಡ ಪ್ರಮಾಣದ ಜನಸಂಖ್ಯಾ ಬದಲಾವಣೆಯನ್ನು ಎದುರಿಸುತ್ತಿದೆ. ಈ ಅಕ್ರಮ ಮತದಾರರ ಗುರುತಿನ ಚೀಟಿಗಳೇ ಕೊಡವರ ರಾಜಕೀಯ ಅಸ್ತಿತ್ವದ ವಿರೂಪಕ್ಕೆ ಮೂಲ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಭಾರತದ ಇತರ ರಾಜ್ಯಗಳ ಜನರು ತಮ್ಮ ತವರು ಜಿಲ್ಲೆಯಲ್ಲಿ ಮಾತ್ರವಲ್ಲದೆ ಕೊಡಗು ಜಿಲ್ಲೆಯಲ್ಲಿ ಕೂಡ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಹೊಂದಿದ್ದಾರೆ. ಚುನಾವಣೆಯ ಸಮಯದಲ್ಲಿ, ಕೊಡಗಿನಲ್ಲ್ಲಿ ಮತ ಚಲಾಯಿಸುತ್ತಾರೆ. ಅಲ್ಲದೆ ತಮ್ಮ ತವರು ರಾಜ್ಯಕ್ಕೆ ಪ್ರಯಾಣಿಸಿ ಅಲ್ಲಿಯೂ ಮತದಾನ ಮಾಡುತ್ತಾರೆ ಎಂದರು. ಲೋಕಸಭೆ ಚುನಾವಣೆ ಭಾರತದಾದ್ಯಂತ 5 ರಿಂದ 6 ಹಂತಗಳಲ್ಲಿ ನಡೆಯುತ್ತದೆ ಮತ್ತು ರಾಜ್ಯ ಚುನಾವಣೆಗಳು ಸಹ ವಿಭಿನ್ನ ಸಮಯಗಳಲ್ಲಿ ನಡೆಯುತ್ತವೆ. ವಿವಿಧ ಮತದಾನದ ವೇಳಾಪಟ್ಟಿಯು ಅಂತಹ ದ್ವಿ-ಐಡಿ ಹೊಂದಿರುವವರಿಗೆ ಹಲವು ಬಾರಿ ಮತ ಚಲಾಯಿಸಲು ಅನಗತ್ಯ ಅನುಕೂಲವನ್ನು ನೀಡುತ್ತದೆ. ಇದು ಒಬ್ಬ ವ್ಯಕ್ತಿ, ಒಂದು ಮತ ತತ್ವವನ್ನು ಬುಡಮೇಲು ಮಾಡುತ್ತದೆ ಮತ್ತು ಕೊಡವರ ರಾಜಕೀಯ ಪ್ರಾತಿನಿಧ್ಯವನ್ನು ವಿರೂಪಗೊಳಿಸುತ್ತದೆ ಎಂದು ಗಮನ ಸೆಳೆದರು.ಅಕ್ರಮ ಮತದಾರರು: ಸುಂಟಿಕೊಪ್ಪ ಮತ್ತಿಕಾಡು, ಸಿದ್ದಾಪುರ, ಕುಟ್ಟ ಮುಂತಾದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ವ್ಯಕ್ತಿಗಳು ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಕಾರ್ಮಿಕರನ್ನು ದೊಡ್ಡ ಕಾರ್ಪೊರೇಟ್ ತೋಟಗಳಿಗೆ ಪೂರೈಸುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರಕ್ರಿಯೆಯಲ್ಲಿ ವಲಸೆ ಕಾರ್ಮಿಕರಿಗೆ ನಕಲಿ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ಆಧಾರ್ ಗೆ 2 ಸಾವಿರ ರು. ವಸೂಲಿ ಮಾಡಲಾಗುತ್ತಿದೆ. ಈ ಸಂಘಟಿತ ಜಾಲವು ಕೊಡಗಿನ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆಗೊಳ್ಳಲು ಅನುಕೂಲ ಮಾಡಿಕೊಡುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.

ಕೊಡಗಿನ ಮತದಾರರ ಪಟ್ಟಿಯನ್ನು ನೆರೆಯ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಹಾಸನ, ದಕ್ಷಿಣ ಕನ್ನಡ ಮತ್ತು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳೊಂದಿಗೆ ತಪಾಸಣೆಗೆ ಒಳಪಡಿಸಿ ದ್ವಿಮುಖ ನಮೂದುಗಳನ್ನು ರದ್ದುಗೊಳಿಸಬೇಕು. ಹಾಗೆಯೇ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನ ರೋಖಿನ್ ಪ್ರಾಂತ್ಯದ (ರೋಹಿಂಗ್ಯಾ) ವಿದೇಶಗಳಿಂದ ರಹಸ್ಯವಾಗಿ ಪೌರತ್ವ ಪಟ್ಟಿಗೆ ಸೇರಿದ ಅಕ್ರಮ ವಲಸಿಗರನ್ನು ತೆಗೆದು ಹಾಕಬೇಕು. ನಕಲಿ ಐಡಿಗಳನ್ನು ಒದಗಿಸುವ ಏಜೆಂಟರು, ದಲ್ಲಾಳಿಗಳು ಹಾಗೂ ಸಹಕರಿಸುವವರ ವಿರುದ್ಧ ಐಪಿಸಿ 420, 468, 471 ಮತ್ತು ಆರ್‌ಪಿ ಕಾಯ್ದೆ 1950 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು. ಎಸ್‌ಐಆರ್ ಪ್ರಾರಂಭಕ್ಕೂ ಮುನ್ನ ಸುಂಟಿಕೊಪ್ಪ, ಮತ್ತಿಕಾಡು, ಸಿದ್ದಾಪುರ ಮತ್ತು ಕುಟ್ಟ ಮತ್ತಿತರ ತೋಟದ ವಲಯಗಳಲ್ಲಿ ಪರಿಶೀಲನೆಗಾಗಿ ಮುಖ್ಯ ಚುನಾವಣಾಧಿಕಾರಿಗಳು ವಿಶೇಷ ಕಾರ್ಯಪಡೆಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.ಚೋಳಪಂಡ ಜ್ಯೋತಿ ನಂಜಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಮೆ.ಅಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ನಂದೇಟಿರ ರವಿ ಸುಬ್ಬಯ್ಯ, ಮಂದಪಂಡ ಮನೋಜ್ ಮಂದಣ್ಣ, ಕಿರಿಯಮಾಡ ಶೇರಿನ್, ಅರೇಯಡ ಗಿರೀಶ್, ಅಪ್ಪಾರಂಡ ಪ್ರಸಾದ್ ಕುಶಾಲಪ್ಪ, ಪುದಿಯೋಕಡ ಕಾಶಿ ಕರುಂಬಯ್ಯ, ಮಣವಟ್ಟಿರ ಚಿಣ್ಣಪ್ಪ, ಪುದಿಯೋಕಡ ಪೃಥ್ವಿ, ಪುಟ್ಟಿಚಂಡ ಡಾನ್ ದೇವಯ್ಯ, ಬೇಪಡಿಯಂಡ ಬಿದ್ದಪ್ಪ, ಸಾದೆರ ರಮೇಶ್, ಪಾಲೇಕಂಡ ಪ್ರಧಾನ್ ಪೂಣಚ್ಚ, ಚೋಳಪಂಡ ನಾಣಯ್ಯ, ನಂದಿನೆರವಂಡ ಮಿಟ್ಟು ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ಚೊಕ್ಕಂಡ ಕಟ್ಟಿ, ಅಚ್ಚಕಾಳೇರ ನವೀನ್ ಮೊಣ್ಣಪ್ಪ, ಕೂತಂಡ ರೋಷನ್ ಮತ್ತಿತರರು ಪಾಲ್ಗೊಂಡಿದ್ದರು.ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ.ಸಹನಾ ಆದಿಮನಿ ಜ್ಞಾಪನಾ ಪತ್ರ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ಗೆ ಅಭಿನಂದನೆ
ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಪ್ರೇಮ ಕುಮಾರ್