ಸಹ ವಿದ್ಯುತ್ ಘಟಕ ಸ್ಥಗಿತ; ಗ್ರಿಡ್‌ನಿಂದ ಮೈಷುಗರ್ ಕಾರ್ಖಾನೆಗೆ ಚಾಲನೆ

KannadaprabhaNewsNetwork |  
Published : Aug 15, 2025, 01:00 AM IST
೧೪ಕೆಎಂಎನ್‌ಡಿ-೧ಮತ್ತು ೨ಕಬ್ಬು ತಂದು ಸಾಲುಗಟ್ಟಿ ನಿಂತಿರುವ ಟ್ರ್ಯಾಕ್ಟರ್‌ಗಳು. | Kannada Prabha

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ಆರಂಭಿಸಿ ಒಂದು ತಿಂಗಳಾದರೂ ಇದುವರೆಗೂ ಸಹ ವಿದ್ಯುತ್ ಘಟಕ ಆರಂಭಗೊಂಡಿಲ್ಲ. ಮತ್ತೆ ವಿದ್ಯುತ್ ಇಲಾಖೆಯ ಗ್ರಿಡ್‌ನಿಂದಲೇ ವಿದ್ಯುತ್‌ನ್ನು ಪಡೆದು ಕಾರ್ಖಾನೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ಆರಂಭಿಸಿ ಒಂದು ತಿಂಗಳಾದರೂ ಇದುವರೆಗೂ ಸಹ ವಿದ್ಯುತ್ ಘಟಕ ಆರಂಭಗೊಂಡಿಲ್ಲ. ಮತ್ತೆ ವಿದ್ಯುತ್ ಇಲಾಖೆಯ ಗ್ರಿಡ್‌ನಿಂದಲೇ ವಿದ್ಯುತ್‌ನ್ನು ಪಡೆದು ಕಾರ್ಖಾನೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆರ್.ಬಿ.ಟೆಕ್ ಕಂಪನಿ ಮತ್ತು ಸರ್ಕಾರದ ನಡುವೆ ಕಬ್ಬು ಅರೆಯವಿಕೆಯಲ್ಲಿ ಆಗಿರುವ ಒಪ್ಪಂದವೇನು, ನಿರ್ವಹಣೆ-ಕಾರ್ಯಾಚರಣೆ ಹೊಣೆ ಹೊತ್ತಿರುವ ಖಾಸಗಿ ಕಂಪನಿ ನಿತ್ಯ ಎಷ್ಟು ಟನ್ ಕಬ್ಬು ಅರೆಯಬೇಕು, ಈಗ ಎಷ್ಟು ಅರೆಯಲಾಗುತ್ತಿದೆ ಎಂಬ ಯಾವುದೇ ಮಾನದಂಡಗಳಿಲ್ಲದೆ ನಿರ್ದಿಷ್ಟ ಗುರಿ, ದಿಕ್ಕು-ದೆಸೆ ಇಲ್ಲದೆ ಅವ್ಯವಸ್ಥಿತ ರೀತಿಯಲ್ಲಿ ಕಾರ್ಖಾನೆಯನ್ನು ನಡೆಸಲಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಸಹ ವಿದ್ಯುತ್ ಘಟಕ ಚಾಲನೆಗೊಳ್ಳಬೇಕಾದರೆ ನಿತ್ಯ ಕಾರ್ಖಾನೆಯಲ್ಲಿ ೩೦೦೦ದಿಂದ ೩೫೦೦ ಟನ್ ಕಬ್ಬು ಅರೆಯಲೇಬೇಕು. ಆಗ ಟರ್ಬೈನ್ ಚಾಲನೆಗೊಳ್ಳುತ್ತದೆ. ಪ್ರಸ್ತುತ ಕಾರ್ಖಾನೆಯ ಕಬ್ಬು ಅರೆಯುವಿಕೆ ಪ್ರಮಾಣ ೨೦೦೦ ಟನ್ ದಾಟದ ಹಿನ್ನೆಲೆಯಲ್ಲಿ ಟರ್ಬೈನ್ ಕೂಡ ಚಾಲನೆಗೊಳ್ಳುತ್ತಿಲ್ಲ. ಬಾಯ್ಲಿಂಗ್ ಹೌಸ್ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಾರ್ಖಾನೆಯನ್ನು ವ್ಯವಸ್ಥಿತವಾಗಿ ಕಬ್ಬು ಅರೆಯುವಿಕೆಗೆ ಸಜ್ಜುಗೊಳಿಸದಿರುವುದು ಇಂದಿನ ಎಲ್ಲಾ ಅವಾಂತರಗಳಿಗೆ ಮೂಲ ಕಾರಣವಾಗಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕಾರ್ಖಾನೆಯ ೫೩ ಕೋಟಿ ರು. ವಿದ್ಯುತ್ ಬಿಲ್ ಬಾಕಿ ಹಣವನ್ನು ಮನ್ನಾ ಮಾಡಿತ್ತು. ಇದೀಗ ಕಾರ್ಖಾನೆಯ ಅಸಮರ್ಥ ಕಾರ್ಯಾಚರಣೆಯಿಂದ ವಿದ್ಯುತ್ ಬಿಲ್ ಮತ್ತೆ ಬೆಳೆಯಲಾರಂಭಿಸಿದೆ. ಸ್ವಂತ ಇಂಧನ ಶಕ್ತಿಯೊಂದಿಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವಿದ್ದರೂ ಅವ್ಯವಸ್ಥಿತ ಆಡಳಿತದಿಂದ ಕಾರ್ಖಾನೆಗೆ ವಿದ್ಯುತ್ ಹೊರೆಯಾಗಿ ಪರಿಣಮಿಸಿದೆ.

ತಿಂಗಳಲ್ಲಿ ೪೫ ಸಾವಿರ ಟನ್ ಕಬ್ಬು ನುರಿತ:

ಕಳೆದೊಂದು ತಿಂಗಳಿಂದ ಕಾರ್ಖಾನೆಯಲ್ಲಿ ಕೇವಲ ೪೫ ಸಾವಿರ ಟನ್ ಕಬ್ಬನ್ನು ಮಾತ್ರ ಅರೆಯಲಾಗಿದೆ. ನಿತ್ಯ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ೨ ಸಾವಿರ ಟನ್ ಮೀರುತ್ತಿಲ್ಲ. ನಿತ್ಯ ೩೫೦೦ ಟನ್ ಕಬ್ಬು ಅರೆಯುವುದಕ್ಕೆ ಮಿಲ್‌ನ್ನೂ ಸಿದ್ಧಪಡಿಸಿಲ್ಲ. ಒಪ್ಪಿಗೆ ಕಬ್ಬು ಸಾಕಷ್ಟು ಪ್ರಮಾಣದಲ್ಲಿ ಕಾರ್ಖಾನೆಯತ್ತ ಬರುತ್ತಿದ್ದರೂ ಅದನ್ನು ಅರೆಯಲಾಗದಷ್ಟು ಅಸಮರ್ಥತೆಯನ್ನು ಪ್ರದರ್ಶಿಸಲಾಗುತ್ತಿದೆ. ಕಾರ್ಖಾನೆಯನ್ನು ಗಂಟೆಗಟ್ಟಲೆ ನಿಲ್ಲಿಸಿ ಬಳಿಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್ ಅವರಿಗೆ ತಾಂತ್ರಿಕ ಜ್ಞಾನವಿಲ್ಲ, ಅಧ್ಯಕ್ಷ ಸಿ.ಡಿ.ಗಂಗಾಧರ್‌ಗೆ ಅನುಭವವಿಲ್ಲ. ೬೦ ವರ್ಷ ಮೇಲ್ಪಟ್ಟವರನ್ನು ನೇಮಕ ಮಾಡಿಕೊಂಡು ಬೇಕಾಬಿಟ್ಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಾಗಿ ಕಾರ್ಖಾನೆ ಸ್ಥಿತಿ ಅಯೋಮಯ ಎನ್ನುವಂತಾಗಿದ್ದು, ಪುನಶ್ಚೇತನದ ಮಾತು ಕನಸಾಗಿಯೇ ಉಳಿದಿದೆ.

೧೦೦ ಹೆಚ್ಚುವರಿ ಲಾರಿಗೆ ಅನುಮತಿ:

ರಾಜ್ಯ ಸರ್ಕಾರವನ್ನು ಕಾಡಿ ಬೇಡಿ ೧೦ ಕೋಟಿ ರು. ದುಡಿಯುವ ಬಂಡವಾಳ ತಂದರೂ ಕಾರ್ಖಾನೆ ಪ್ರಗತಿಗೆ ಪೂರಕವಾಗಿ ನಡೆಯುತ್ತಿಲ್ಲ. ಬೇಡಿಕೆಗಿಂತ ೧೦೦ ಲಾರಿಗಳನ್ನು ಹೆಚ್ಚುವರಿಯಾಗಿ ಕಬ್ಬು ತರುವುದಕ್ಕೆ ಅನುಮತಿ ನೀಡಲಾಗಿದೆ. ನಿತ್ಯ ಕಬ್ಬು ಅರೆಯುವಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಲೂ ಇಲ್ಲ. ನಿತ್ಯ ೩೫೦೦ ಟನ್ ಕಬ್ಬು ಅರೆಯುವಂತೆ ಮಾಡಲು ಯಾವೊಂದು ಪ್ರಯತ್ನಗಳೂ ಕಾರ್ಖಾನೆಯೊಳಗೆ ನಡೆಯುತ್ತಿಲ್ಲ. ಇದರಿಂದ ಸಹ ವಿದ್ಯುತ್ ಘಟಕಕ್ಕೆ ಚಾಲನೆ ನೀಡಲಾಗುತ್ತಿಲ್ಲ, ಇಳುವರಿ ಹೆಚ್ಚಳವಾಗುತ್ತಿಲ್ಲ. ಗುಣಮಟ್ಟದ ಸಕ್ಕರೆ ಉತ್ಪಾದನೆಯಾಗದ ಸ್ಥಿತಿಯಲ್ಲಿ ಕಾರ್ಖಾನೆಯನ್ನು ನಡೆಸಲಾಗುತ್ತಿದೆ.

ಕಳೆದ ವರ್ಷ ಕಬ್ಬು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ಕಬ್ಬು ಕಟಾವು ಮಾಡಲು ಬಂದವರನ್ನು ಖಾಸಗಿ ಕಾರ್ಖಾನೆಯವರು ಕರೆದೊಯ್ಯುತ್ತಿದ್ದಾರೆ. ಅದಕ್ಕಾಗಿ ಕಬ್ಬನ್ನು ಅರೆಯಲಾಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಬಾರಿ ಕಬ್ಬು ಸಾಕಷ್ಟು ಪ್ರಮಾಣದಲ್ಲಿ ಕಾರ್ಖಾನೆಯತ್ತ ಬರುತ್ತಿದ್ದರೂ ಅರೆಯಲು ಸಾಧ್ಯವಾಗದ ಸ್ಥಿತಿ ಕಾರ್ಖಾನೆಯದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಖಾನೆಗೆ ಪದೇ ಪದೇ ಹಣ ಕೊಟ್ಟು ಅವ್ಯವಸ್ಥಿತವಾಗಿ ನಡೆಸುವುದಕ್ಕೆ ಬದಲಾಗಿ ಖಾಸಗಿಯವರಿಗೆ ಗುತ್ತಿಗೆ ನ ನೀಡಿ ಸುವ್ಯವಸ್ಥಿತವಾಗಿ ನಡೆಯುವುದಕ್ಕೆ ಸರ್ಕಾರ ಮನಸ್ಸು ಮಾಡಬೇಕು. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಎಲ್ಲೆಡೆ ಸಾಲುಗಟ್ಟಿ ನಿಂತ ಟ್ರ್ಯಾಕ್ಟರ್‌ಗಳು:

ಮೈಷುಗರ್ ಕಾರ್ಖಾನೆ ಆಗಾಗ್ಗೆ ನಿಂತು ನಿಂತು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಕಬ್ಬು ತುಂಬಿಕೊಂಡು ಬಂದಿರುವ ಟ್ರ್ಯಾಕ್ಟರ್‌ಗಳು, ಎತ್ತಿನಗಾಡಿಗಳ ಉದ್ದನೆಯ ಸಾಲು ಎಲ್ಲೆಡೆ ಕಂಡುಬರುತ್ತದೆ. ಟ್ರ್ಯಾಕ್ಟರ್‌ಗಳು ಕಾರ್ಖಾನೆಯ ಯಾರ್ಡ್‌ನಿಂದ ಆರಂಭವಾಗಿ ಡವರಿ ಸ್ಲಂ, ನಾಲಬಂದವಾಡಿ ಸ್ಲಂನಿಂದ ಶ್ರೀ ಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದವರೆಗೆ ಮತ್ತೊಂದು ಕಡೆ ಯಾರ್ಡ್‌ನಿಂದ ಮೈಷುಗರ್ ಕಲ್ಯಾಣಮಂದಿರದವರೆಗೆ ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿವೆ.

ಕಬ್ಬು ಅರೆಯುವಿಕೆ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಟ್ರ್ಯಾಕ್ಟರ್‌ನಲ್ಲಿ ಕಬ್ಬು ತಂದವರು ಮೂರು ದಿನವಾದರೂ ಮನೆಗೆ ಮರಳಿಲ್ಲ. ಕಬ್ಬು ತಂದವರಿಗೆ ಕನಿಷ್ಠ ಮೂಲ ಸೌಕರ್ಯವನ್ನೂ ಒದಗಿಸಿಲ್ಲ. ಕಾರ್ಖಾನೆ ಆಗಾಗ ನಿಲುಗಡೆಯಾಗುತ್ತಿರುವ ಬಗ್ಗೆ ಯಾರೊಬ್ಬರೂ ಮಾಹಿತಿಯನ್ನೇ ನೀಡುವುದಿಲ್ಲ. ಅಲ್ಲಿಗೆ ಹೋದರೂ ಯಾರೂ ಇರುವುದಿಲ್ಲ. ನಿಮಗೆ ಕಾಯಲಾಗದಿದ್ದರೆ ಬೇರೆ ಕಾರ್ಖಾನೆಗೆ ಹೋಗಿ ಎನ್ನುತ್ತಾರೆ. ಏನು ಮಾಡಬೇಕೆಂದು ತೋಚದೆ ಕಾದು ಕುಳಿತಿರುವುದಾಗಿ ಕಬ್ಬು ತಂದವರು ತಿಳಿಸಿದರು.

PREV

Recommended Stories

ಬೆಳಗಾವಿಯಲ್ಲಿ ಕತ್ತಿ ವರ್ಸಸ್ ಜಾರಕಿಹೊಳಿ ಡಿಸಿಸಿ ಸಮರ
₹150 ಕೋಟಿ ದೋಚಿದ್ದ ಸೈಬರ್‌ ವಂಚಕ ದಾವಣಗೆರೆಯಲ್ಲಿ ಸೆರೆ