ರಾಜ್ಯದಲ್ಲಿ ಕಾಂಗ್ರೆಸ್‌ನ ವಿಭಿನ್ನ ಬಣಗಳ ಸಮ್ಮಿಶ್ರ ಸರ್ಕಾರ: ಶಾಸಕ ಸಿ.ಸಿ. ಪಾಟೀಲ

KannadaprabhaNewsNetwork |  
Published : Aug 05, 2026, 02:00 AM IST
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಸಿ.ಸಿ.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಕೆ.ಸಿ. ವೇಣುಗೋಪಾಲ್ ಅವರ ಅನಗತ್ಯ ಹಸ್ತಕ್ಷೇಪದಿಂದಾಗಿ ರಾಜ್ಯ ಕಾಂಗ್ರೆಸ್ ಪಡೆಗೆ ಇಂತಹ ದುಸ್ಥಿತಿ ಬಂದೊದಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.

ಗದಗ: ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್ ಸರ್ಕಾರವೋ ಅಥವಾ ಕಾಂಗ್ರೆಸ್ ಪಕ್ಷದ ವಿಭಿನ್ನ ಬಣಗಳ ನಡುವಿನ ಸಮ್ಮಿಶ್ರ ಸರ್ಕಾರವೋ ಎನ್ನುವ ತೀವ್ರ ಜಿಜ್ಞಾಸೆ ಜನರಲ್ಲಿ ಮೂಡಿದೆ. ರಾಜ್ಯದ ನಿಜವಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೋ, ವೇಣುಗೋಪಾಲ್, ಸುರ್ಜೇವಾಲಾ ಅಥವಾ ಮಲ್ಲಿಕಾರ್ಜುನ ಖರ್ಗೆಯವರೋ ಎಂಬುದು ತಿಳಿಯುತ್ತಿಲ್ಲ ಎಂದು ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ರಚನೆ, ಪುನಾರಚನೆ ಅಥವಾ ವಿಸ್ತರಣೆ ಎಂಬುದು ಸಂವಿಧಾನಾತ್ಮಕವಾಗಿ ಸಿಎಂ ಸಂಪೂರ್ಣ ಪರಮಾಧಿಕಾರವಾಗಿರುತ್ತದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ ಸಿಎಂ ಆದವರು ತಮ್ಮ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ, ಸಲಹೆ ಪಡೆದು ಸಂಪುಟ ರಚನೆ ಮಾಡುವುದು ಸಹಜ ಪ್ರಕ್ರಿಯೆ.

ರಾಜ್ಯದ ರಾಜಕೀಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಅಧಿಕೃತ ಲೆಟರ್ ಹೆಡ್ ಮೇಲೆ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್ ಅಧ್ಯಕ್ಷರು ಪಟ್ಟಿಯಲ್ಲಿರುವ ಹೆಸರುಗಳನ್ನು ಅಂಗೀಕರಿಸಿದ್ದಾರೆ ಎಂದು ಪತ್ರದ ಮೂಲಕ ಆದೇಶ ಹೊರಡಿಸಿದ ಮಾದರಿಯಲ್ಲಿ ಕೆ.ಸಿ. ವೇಣುಗೋಪಾಲ್ ಅವರ ಸಹಿಯೊಂದಿಗೆ ಪಟ್ಟಿ ಬಹಿರಂಗವಾಗಿದೆ ಎಂದು ಲೇವಡಿ ಮಾಡಿದರು.

ಕೆ.ಸಿ. ವೇಣುಗೋಪಾಲ್ ಅವರ ಅನಗತ್ಯ ಹಸ್ತಕ್ಷೇಪದಿಂದಾಗಿ ರಾಜ್ಯ ಕಾಂಗ್ರೆಸ್ ಪಡೆಗೆ ಇಂತಹ ದುಸ್ಥಿತಿ ಬಂದೊದಗಿದೆ. ಅವರು ಪ್ರತಿ 15 ದಿನಕ್ಕೊಮ್ಮೆ ರಾಜ್ಯಕ್ಕೆ ಬರುತ್ತಾರೆ. ಆದರೆ ಇಲ್ಲಿಂದ ವಾಪಸ್ ಹೋಗುವಾಗ ಏನು ತೆಗೆದುಕೊಂಡು ಹೋಗುತ್ತಾರೋ ಆ ದೇವರಿಗೇ ಗೊತ್ತು ಎಂದು ಗಂಭೀರ ಆರೋಪಿಸಿದರು.

ಸಾಂವಿಧಾನಿಕ ಹುದ್ದೆಗಳಾದ ಸ್ಪೀಕರ್ ಮತ್ತು ಸಭಾಪತಿಗಳನ್ನು ಚುನಾವಣೆ ಅಥವಾ ಅವಿರೋಧ ಆಯ್ಕೆಯ ಮೂಲಕ ಗೌರವಯುತವಾಗಿ ಆಯ್ಕೆ ಮಾಡಲಾಗುತ್ತದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಎಐಸಿಸಿ ಲೆಟರ್‌ ಹೆಡ್‌ನಲ್ಲೇ ಸ್ಪೀಕರ್ ಹಾಗೂ ಸಭಾಪತಿಗಳ ಹೆಸರುಗಳನ್ನು ನಮೂದಿಸಿ ಪ್ರಕಟಿಸಿದೆ. ಮಾತೆತ್ತಿದರೆ ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಓಡಾಡುವ ಕಾಂಗ್ರೆಸ್‌ನವರಿಗೆ ಸಾಂವಿಧಾನಿಕ ಹುದ್ದೆಗಳ ಹೆಸರುಗಳನ್ನು ಲೆಟರ್ ಹೆಡ್‌ನಲ್ಲಿ ಪ್ರಕಟಿಸುವುದೇ ಸಂವಿಧಾನವೇ? ಈ ಸರ್ಕಾರಕ್ಕೆ ಕನಿಷ್ಠ ಮಾನ, ಮರ್ಯಾದೆ ಇದೆಯಾ ಎಂದು ಕಟುವಾಗಿ ಪ್ರಶ್ನಿಸಿದರು.

ಸಂಪುಟ ಕಸರತ್ತಿನಲ್ಲಿ ಕಾಂಗ್ರೆಸ್ ಪಕ್ಷವು ಭ್ರಷ್ಟರಿಗೆ ಬಹುಮಾನ ನೀಡಿದ್ದು, ಕಳಂಕಿತರಿಗೆ ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿದೆ. ಇದೇ ವೇಳೆ ಡಜನ್ ಸಚಿವರಿಗೆ ಕೊಕ್ ನೀಡಲಾಗಿದ್ದು, ಗದಗ ಸೇರಿದಂತೆ ರಾಜ್ಯದ ಸುಮಾರು 10 ಪ್ರಮುಖ ಜಿಲ್ಲೆಗಳಿಗೆ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ನೀಡದೆ ಸಂಪೂರ್ಣ ಕಡೆಗಣಿಸಲಾಗಿದೆ.

ಸರ್ಕಾರದ ಈ ನಡೆಯಿಂದ ಬೇಸತ್ತು ಯಶವಂತರಾಯಗೌಡರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟರಮಟ್ಟಿಗೆ ತಲುಪಿದೆ ಎಂಬುದನ್ನು ಊಹಿಸಬಹುದು. ಇಲ್ಲಿ ನಿಜವಾಗಿಯೂ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆಯಾ ಎಂಬುದನ್ನು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜು ಕುರುಡಗಿ, ಲಿಂಗರಾಜಗೌಡ ಪಾಟೀಲ, ಉಷಾ ದಾಸರ, ರವಿ ದಂಡೀನ, ಮುತ್ತು ಮುಶಿಗೇರಿ, ಎಂ.ಎಂ. ಹಿರೇಮಠ, ಮುಂಜುನಾಥ ಮುಳಗುಂದ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಹಿಟ್ನಾಳಗೆ ಸಚಿವ ಸ್ಥಾನ ತಪ್ಪಿದ್ಯಾಕೆ ?
ಟಗರು, ಕುರಿ ಕಳ್ಳತನ, ಇಬ್ಬರು ಯುವಕರ ಬಂಧನ