ನಾರಾಯಣ ಹೆಗಡೆ
ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರ ಮುಂದೆ ಇದೀಗ ಅಭಿವೃದ್ಧಿಯ ದೊಡ್ಡ ಸವಾಲು ನಿಂತಿದೆ. ಮುಂಬರುವ ಸುಮಾರು ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಜಿಲ್ಲೆಯ ಬಹುಕಾಲದ ಸಮಸ್ಯೆಗಳನ್ನು ಪರಿಹರಿಸಿ ಜನರ ನಿರೀಕ್ಷೆಗಳನ್ನು ಈಡೇರಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ.
ಮೂರು ವರ್ಷಗಳ ಬಳಿಕ ಜಿಲ್ಲೆಗೆ ಮಂತ್ರಿ ಸ್ಥಾನದ ಬರವೇನೋ ನೀಗಿದೆ. ಆದರೆ, ಮಳೆಯಿಲ್ಲದೇ ಬರಗಾಲ ಶುರುವಾಗುವ ಸಾಧ್ಯತೆ ಗೋಚರಿಸುತ್ತಿದೆ. ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಸತತ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿದೆ. ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗುವ ಹಂತ ತಲುಪಿದ್ದು, ಬೆಳೆ ನಷ್ಟ, ಸಾಲದ ಹೊರೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಗ್ರಾಮೀಣ ಭಾಗವನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬರ ನಿರ್ವಹಣೆ, ರೈತರಿಗೆ ಪರಿಹಾರ, ನೀರಾವರಿ ಯೋಜನೆಗಳಿಗೆ ವೇಗ ನೀಡುವುದು ಸಚಿವರ ಮೊದಲ ಆದ್ಯತೆಯಾಗಬೇಕಿದೆ.ಹಾವೇರಿ ನಗರದ ಜನರು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿರುವ 24×7 ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ. ಕೋಟ್ಯಂತರ ರುಪಾಯಿ ವೆಚ್ಚದ ಈ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ನಗರ ನಿವಾಸಿಗಳಿಗೆ ನಿರಂತರ ನೀರು ಪೂರೈಕೆ ಸಾಧ್ಯವಾಗಿಲ್ಲ. ಈ ಅವಧಿಯಲ್ಲಾದರೂ ಯೋಜನೆ ಪೂರ್ಣಗೊಂಡು ಜನರ ಮನೆಗಳಿಗೆ ಸಮರ್ಪಕ ಕುಡಿಯುವ ನೀರು ತಲುಪುವ ನಿರೀಕ್ಷೆ ಹೆಚ್ಚಿದೆ.
ಸಾಮಾಜಿಕ ನ್ಯಾಯದ ಪ್ರತಿನಿಧಿಯಾಗಿ ಸಚಿವ ಸ್ಥಾನ ಪಡೆದಿರುವ ರುದ್ರಪ್ಪ ಲಮಾಣಿ ಅವರು ರಾಜಕೀಯ ಯಶಸ್ಸಿನ ಜೊತೆಗೆ ಅಭಿವೃದ್ಧಿಯಲ್ಲೂ ತಮ್ಮ ಛಾಪು ಮೂಡಿಸಿದರೆ ಮಾತ್ರ ಜಿಲ್ಲೆಯ ಜನರ ನಿರೀಕ್ಷೆಗಳಿಗೆ ನ್ಯಾಯ ಒದಗಿಸಿದಂತಾಗಲಿದೆ. ಉಳಿದಿರುವ ಅಧಿಕಾರಾವಧಿಯಲ್ಲಿ ಅವರು ಕೈಗೊಳ್ಳುವ ನಿರ್ಧಾರಗಳು ಜಿಲ್ಲೆಯ ಭವಿಷ್ಯವನ್ನು ನಿರ್ಧರಿಸಲಿವೆ.
ಹೃದಯ, ಮೂತ್ರಪಿಂಡ, ನರರೋಗ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಜಿಲ್ಲೆಯಿಂದ ಪ್ರತಿದಿನ ನೂರಾರು ರೋಗಿಗಳು ಹೊರ ಜಿಲ್ಲೆಗಳಿಗೆ ತೆರಳಬೇಕಾಗುತ್ತಿದೆ. ಸಚಿವ ರುದ್ರಪ್ಪ ಲಮಾಣಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಹಾವೇರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಿ, ಜಿಲ್ಲೆಯಲ್ಲಿ ಉನ್ನತ ಮಟ್ಟದ ಆರೋಗ್ಯ ಸೇವೆಗೆ ದಾರಿ ಮಾಡಿಕೊಟ್ಟರೆ ಅದು ಅವರ ಮಹತ್ವದ ಸಾಧನೆಯಾಗಿ ದಾಖಲಾಗಲಿದೆ.