ಬಳ್ಳಾರಿ: ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಸಮಾಜಕ್ಕೆ ದಿಕ್ಕು ತೋರಿಸುವ ಶಕ್ತಿಯುತ ಸಾಧನ ಎಂಬುದನ್ನು ಬಳ್ಳಾರಿ ರಾಘವರು ತಮ್ಮ ರಂಗಬದುಕಿನ ಮೂಲಕ ಸಾಬೀತುಪಡಿಸಿದ ಮಹಾನ್ ಸಾಧಕರು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ತಿಳಿಸಿದರು.
ವಕೀಲ ವೃತ್ತಿಯ ಜೊತೆಗೆ ರಂಗಭೂಮಿಯನ್ನೂ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಬಳ್ಳಾರಿ ರಾಘವರು ಸಾಮಾಜಿಕ ಬದಲಾವಣೆಗೆ ಕಾರಣವಾಗುವ ನಾಟಕಗಳನ್ನು ರಚಿಸಿದರು. ರಂಗಭೂಮಿ ಮೂಲಕ ಸಮಾಜವಾದಿ ಹಾಗೂ ಮಾನವೀಯ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕಾರ್ಯವನ್ನು ಕೈಗೊಂಡರು. ವಕೀಲರಾಗಿದ್ದರೂ ಜನಸೇವೆಯ ನಿಜವಾದ ಮಾರ್ಗವನ್ನು ಅವರು ರಂಗಭೂಮಿಯಲ್ಲಿ ಕಂಡುಕೊಂಡರು. ಸಮಾಜದಲ್ಲಿದ್ದ ಅನ್ಯಾಯ, ಅಸಮಾನತೆ, ಅಂಧಶ್ರದ್ಧೆ ಹಾಗೂ ಜಾತಿ-ಮತ ಭೇದದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ತಮ್ಮ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು ಎಂದು ಹೇಳಿದರು.
ಕಲಾವಿದನ ಹೊಣೆಗಾರಿಕೆ ಕೇವಲ ಅಭಿನಯಕ್ಕೆ ಸೀಮಿತವಾಗಿರಬಾರದು. ಸಮಾಜದ ನೋವು-ನಲಿವುಗಳನ್ನು ಅರಿತು ಜನರಲ್ಲಿ ಉತ್ತಮ ಚಿಂತನೆ ಬೆಳೆಸುವ ಜವಾಬ್ದಾರಿಯೂ ಕಲಾವಿದನ ಮೇಲಿದೆ. ಈ ನಿಟ್ಟಿನಲ್ಲಿ ಬಳ್ಳಾರಿ ರಾಘವರು ಇಂದಿಗೂ ಪ್ರತಿಯೊಬ್ಬ ರಂಗಕರ್ಮಿಗೆ ಆದರ್ಶ ವ್ಯಕ್ತಿತ್ವವಾಗಿದ್ದಾರೆ. ಅವರ ಜೀವನ, ಮೌಲ್ಯಗಳು ಹಾಗೂ ಕಲಾಸೇವೆ ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.ರಾಘವ ಮೆಮೋರಿಯಲ್ ಅಸೋಸಿಯೇಷನ್ ಹಲವು ವರ್ಷಗಳಿಂದ ಬಳ್ಳಾರಿ ರಾಘವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಾ ಅವರ ನೆನಪನ್ನು ಜೀವಂತವಾಗಿರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳು ರಂಗಭೂಮಿಯ ಬೆಳವಣಿಗೆಗೆ ಹೊಸ ಉತ್ಸಾಹ ತುಂಬುವ ಜತೆಗೆ ಯುವ ಕಲಾವಿದರನ್ನು ಪ್ರೋತ್ಸಾಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಮೈಸೂರಿನ ರಂಗಕರ್ಮಿ ಹುಲುಗಪ್ಪ ಕಟ್ಟೀಮನಿ ಹಾಗೂ ಆಂಧ್ರಪ್ರದೇಶದ ಸಿಕಂದ್ರಾಬಾದ್‌ನ ವಲ್ಲೂರು ಶ್ರೀಹರಿರಾವ್ ಅವರಿಗೆ ರಾಜ್ಯಮಟ್ಟದ ಬಳ್ಳಾರಿ ರಾಘವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳಿಕ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ), ಸವದತ್ತಿ ವತಿಯಿಂದ ಝಾಕೀರ್ ನದಾಫ್ ಅವರ ರಚನೆ ಹಾಗೂ ನಿರ್ದೇಶನದ "ನೆಲ ಮುಗಿಲು " ಕನ್ನಡ ನಾಟಕ ಪ್ರದರ್ಶನಗೊಂಡಿತು. ಎನ್. ಪ್ರಕಾಶ್, ಆಶಾ ಸುಮಂತ್, ಚೆಲ್ಲೂರು ಲಕ್ಷ್ಮಿ ಸುಕುಮಾರ್, ಬಾಣಾಪುರ ರಮೇಶ್ ಗೌಡ ಹಾಗೂ ವಿಷ್ಣು ಹಡಪದ ಕಾರ್ಯಕ್ರಮ ನಿರ್ವಹಿಸಿದರು.