ಕನ್ನಡಪ್ರಭ ವಾರ್ತೆ ಕಾರವಾರ
ಮಯೂರವರ್ಮ ವೇದಿಕೆ ಸ್ಥಳೀಯ ಕಲಾವಿದರು ಹಾಗೂ ಖ್ಯಾತ ಕಲಾವಿದರ ಪ್ರದರ್ಶನಕ್ಕೆ ಸಾಕ್ಷಿಯಾದರೆ, ಅಮ್ಯೂಸಮೆಂಟ್ ಪಾರ್ಕ್, ಸ್ಟಾಲ್‌ಗಳು ಹಾಗೂ ವಿವಿಧ ಸ್ಪರ್ಧೆಗಳು ಆಕರ್ಷಣೆಯಾಗಿದ್ದವು.
ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಚಿತ್ರಕಲೆ, ರೀಲ್ಸ್, ರಂಗೋಲಿ, ಅಡುಗೆ, ಗಾಳಿಪಟ, ಮರಳು ಶಿಲ್ಪ, ಮ್ಯಾರಾಥಾನ್ ಮತ್ತಿತರ ಸ್ಪರ್ಧೆಗಳು, ಕವಿಗೋಷ್ಠಿ, ಶ್ವಾನ ಪ್ರದರ್ಶನ ಗಮನ ಸೆಳೆಯಿತು.ಉತ್ಸವದ ಪ್ರಯುಕ್ತ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ಹೆಲಿಕಾಪ್ಟರ್ ರೈಡ್ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರಮಟ್ಟದ ಗಾಯಕರುಗಳಾದ ಶಂಕರ್ ಮಹಾದೇವನ್, ಸೋನು ನಿಗಮ್, ರಾಜೇಶ್ ಕೃಷ್ಣನ್, ಆಲ್ ಓಕೆ ಅಲೋಕ್, ಮೊಹಮ್ಮದ್ ದ್ಯಾನಿಷ್, ಡಿಜೆ ರಫ್ತಾರ್ ಹಾಗೂ ದಿಲೇರ್ ಮೆಹೆಂದಿ ತಮ್ಮ ಗಾಯನದ ಮೂಲಕ ಗಾನಸುಧೆ ಹರಿಸಿದರು.ಅವಾಂತರ
ಸರ್ಕಾರಿ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಂದಿನ ಬಾರಿ ಜಿಲ್ಲೆಯ ಎಲ್ಲ ಆರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ, ನಮ್ಮ ಕೈಬಲಪಡಿಸಿ ಎನ್ನುವ ಮೂಲಕ ರಾಜಕೀಯ ಮಾತುಗಳನ್ನಾಡಿದರು. ಡಿಕೆಶಿ ಬರಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಬಹುಸಂಖ್ಯೆಯಲ್ಲಿ ಪಾಸ್ ಗಳನ್ನು ನೀಡಿದ್ದರಿಂದ ತಮಗೆ ಆಸನಗಳೇ ಸಿಕ್ಕಿಲ್ಲ ಎಂದು ವಿಐಪಿ ಪಾಸ್ ಪಡೆದ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.ವಿವಿಐಪಿ ಹಾಗೂ ವಿಐಪಿ ವಿಭಾಗದಲ್ಲಿ ನಕಲಿ ಪಾಸ್‌ಗಳ ಹಾವಳಿಯಿಂದ ಪೊಲೀಸರಿಗೂ ಕಿರಿಕಿರಿ ಉಂಟಾಯಿತು. ಪಾಸ್ ವಿತರಿಸಿದ ಸಂಖ್ಯೆಯಲ್ಲೇ ಕುರ್ಚಿ ಹಾಕಲಾಗಿತ್ತು. ಆದರೆ ಕುರ್ಚಿಗಳು ತುಂಬಿ ತುಳುಕಿ ಪಾಸ್ ಪಡೆದವರಿಗೆ ಆಸನವೇ ಇಲ್ಲದಂತಾಯಿತು. ನಕಲಿ ಪಾಸ್ ಹಾವಳಿಯಿಂದ ಇಂತಹ ಅವಾಂತರ ಸೃಷ್ಟಿಯಾಗಿತ್ತು.ಏಳು ವರ್ಷಗಳ ಬಳಿಕ ನಡೆದ ಕರಾವಳಿ ಉತ್ಸವವನ್ನು ಸಪ್ತಾಹ ಸಂಭ್ರಮವನ್ನಾಗಿ ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಉತ್ಸವದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.