ನರಗುಂದ: ಕುವೆಂಪು ಅವರು ಮಲೆನಾಡಿನ ಪರಿಸರವನ್ನು ತಮ್ಮ ಕಾವ್ಯದ ಮೂಲಕ ವರ್ಣಿಸಿ ಪ್ರಕೃತಿಮಾತೆಗೆ ನುಡಿತೋರಣ ಕಟ್ಟಿದ ನಿಸರ್ಗದ ಆರಾಧಕರು. ಸಾಹಿತ್ಯದೊಂದಿಗೆ ದಾರ್ಶನಿಕರಾಗಿ, ಸಮಾಜ ಸುಧಾರಕರಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾದುದು ಎಂದು ಭೈರನಹಟ್ಟಿ- ಶಿರೋಳ ಮಠದ ಶಾಂತಲಿಂಗ ಶ್ರೀಗಳು ತಿಳಿಸಿದರು.
ಕುವೆಂಪು ಅವರು ತಮ್ಮ ಕಾವ್ಯದ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿ ಸಾಹಿತ್ಯದ ಮೂಲಕವೆ ಜನಮಾನಸದ ಮೇಲೆ ಬಲವಾಗಿ ಪರಿಣಾಮ ಬೀರಿದ ಅತ್ಯುತ್ಯಮ ಬರಹಗಾರರಾಗಿದ್ದರು. ಮಾನವಶಾಸ್ತ್ರ, ತತ್ವಶಾಸ್ತ್ರ, ವಿಜ್ಞಾನ, ಆರ್ಥಿಕ ಹಾಗೂ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿದ ಮಹಾನ್ ಚೇತನ. ಅವರ ಕನಸಿನ ಕೂಸಾದ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯನ್ನು ಕಟ್ಟಿ ಬೆಳೆಸಿದ ವಿಶ್ವಚೇತನ ಕುವೆಂಪು ಅವರು ಕನ್ನಡ ನಾಡಿನ ಮೇರು ಸಾಹಿತಿಗಳಾಗಿದ್ದರೆಂದು ಹೇಳಿದರು.ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಡಿ. ಸಕ್ಕರಿ ಮಾತನಾಡಿ, ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಸಾಹಿತ್ಯ ದಿಗ್ಗಜ. ಅವರು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಸಾಹಿತಿ. ಆಡು ಮುಟ್ಟದ ಗಿಡವಿಲ್ಲ ಎಂಬಂತೆ ಸಾಹಿತ್ಯದಲ್ಲಿ ಕುವೆಂಪು ಅವರು ಬರೆಯದ ಕ್ಷೇತ್ರವಿಲ್ಲ, ಹೀಗಾಗಿ ಅವರನ್ನು ಕನ್ನಡ ಸಾಹಿತ್ಯ ಲೋಕದ ಸಾಹಿತ್ಯ ಸಾಮ್ರಾಟ್ ಎಂದರೆ ತಪ್ಪಾಗಲಾರದು ಎಂದರು.ಈ ಸಂದರ್ಭದಲ್ಲಿ ಅಭಿಯಂತರರಾದ ಎಚ್.ಎಸ್. ಬದಾಮಿ, ಪ್ರಸಾದ ಕ್ಯಾದಗುಂಪಿ, ಮಹಾಂತೇಶ ಹಿರೇಮಠ ಸೇರಿದಂತೆ ಮುಂತಾದವರು ಇದ್ದರು.