ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎಸ್.ಪೊನ್ನಣ್ಣ ಭಾಗವಹಿಸಿ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಆಗಿರುವ ಮತಕಳ್ಳತನ ಕುರಿತು ಜನರಲ್ಲಿ ಅರಿವು ಮೂಡಿಸಲೆಂದೇ ಈ ಅಭಿಯಾನ ಕೈಗೊಳ್ಳಲಾಗಿದ್ದು, ಎಲ್ಲರಿಗೂ ಇದು ಗೊತ್ತಾಗಬೇಕಿದೆ. ರಾಹುಲ್ ಗಾಂಧಿ ಈ ಕುರಿತು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸದೇ ಮರು ಪ್ರಶ್ನೆಗಳನ್ನು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶುದ್ಧವಾದ ಮತದಾರರ ಪಟ್ಟಿ ಇದ್ದಲ್ಲಿ ಶುದ್ಧವಾದ ಚುನಾವಣೆ ಸಾಧ್ಯ ಎಂದು ಪ್ರತಿಪಾದಿಸಿದ ಅವರು, ಇಡೀ ಚುನಾವಣಾ ಪ್ರಕ್ರಿಯೆಯೇ ಶುದ್ಧವಾಗಬೇಕು ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿ, ಈ ಅಭಿಯಾನ ಕೇವಲ ನಗರಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ಬೂತ್‌ಮಟ್ಟದಲ್ಲೂ ಸಹಿ ಸಂಗ್ರಹಿಸಲಾಗುತ್ತದೆ. ಪ್ರತಿ ಕ್ಷೇತ್ರದಿಂದ ಸಂಗ್ರಹಿಸಿದ ಸಹಿಗಳನ್ನು ಕೆಪಿಸಿಸಿ ಅ.31ರ ಒಳಗೆ ಕಳುಹಿಸಬೇಕಿದೆ. ಮತಕಳ್ಳತನ ಹೇಗೆ ದೇಶದಲ್ಲಿ ನಡೆದಿದೆ ಮತ್ತು ನಡೆಯುತ್ತಿದೆ ಎಂದು ಜನಸಾಮಾನ್ಯರಿಗೆ ತಿಳಿಸುವುದು ಈ ಅಭಿಯಾನದ ಉದ್ದೇಶ ಎಂದು ಹೇಳಿದರು.
ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟರು ಇನ್ನಾದರೂ ಎಚ್ಚರ ವಹಿಸಬೇಕು. ಮುಂಬರುವ ಚುನಾವಣೆಯ ವೇಳೆ ಮತಗಳ್ಳತನ ಆಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಬಳಿಕ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೂಚನೆಯಂತೆ ದೇಶಾದ್ಯಂತ ನಡೆಯುತ್ತಿರುವ ಮತ ಕಳ್ಳತನದ (ವೋಟ್ ಚೋರಿ) ವಿರುದ್ಧ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ಸಹಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಎ.ಎಸ್ ಪೊನ್ನಣ್ಣ, ಇತರ ಗಣ್ಯರೊಂದಿಗೆ, ಇಂದಿರಾಗಾಂಧಿ ವೃತ್ತದಲ್ಲಿ ಅಳವಡಿಸಿದ ಸಹಿ ಸಂಗ್ರಹ ಫಲಕಕ್ಕೆ ಹಸ್ತಾಕ್ಷರ ಮಾಡುವ ಮೂಲಕ ಚಾಲನೆ ನೀಡಿದರು.