ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಮಾಡುವ ಜೊತೆಗೆ ನಿಯಮ ಬಾಹಿರವಾಗಿ ಮಾರಾಟ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀಡಿ, ಸಿಗರೇಟ್ ಸೇದುವವರಿಗಿಂತಲೂ ಅವರ ಸುತ್ತಮುತ್ತಲಿನ ಅಥವಾ ಆ ಪರಿಸರದಲ್ಲಿರುವ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರುತ್ತದೆ. ಅಂಥವರು ಕ್ಯಾನ್ಸರ್ ಗೆ ಬಲಿಯಾಗುವ ಸಾಧ್ಯತೆಇರುತ್ತದೆ. ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಸೇವನೆ ಹಾನಿ ಬಗ್ಗೆ ಬ್ಯಾನರ್ ಅಳವಡಿಸಬೇಕು. ಸಾರ್ವಜನಿಕರಲ್ಲಿ ತಂಬಾಕಿನ ಉತ್ಪನ್ನಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಕರಪತ್ರ ಗಳನ್ನು ವಿತರಿಸಬೇಕು. ಶಾಲಾ ಕಾಲೇಜು ಆವರಣಗಳಲ್ಲಿ 100 ಮೀ. ಪ್ರದೇಶದಲ್ಲಿ ತಂಬಾಕು ಸೇವನೆ ಹಾಗೂ ಮಾರಾಟ ನಿಷೇಧಿಸಿರುವ ಕಾರಣ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಚ್ಚರ ವಹಿಸಬೇಕು. ಮುಂದೆ ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಲು ಸೂಚಿಸಿದರು. ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಭರತ್ ಕುಮಾರ್ ಮಾತನಾಡಿ, ತಂಬಾಕು ನಿಯಂತ್ರಣ ಕಾನೂನು ಕೋಟ್ಟಾಕಾಯ್ದೆ ಅಡಿ ಚಿಕ್ಕಮಗಳೂರು ತಾಲೂಕಿನಲ್ಲಿ 158, ಕಡೂರು 154, ತರೀಕೆರೆ 150, ಮೂಡಿಗೆರೆ 81, ಕೊಪ್ಪ 38, ಶೃಂಗೇರಿ 64 ಹಾಗೂ ಎನ್.ಆರ್. ಪುರ ತಾಲೂಕಿನಲ್ಲಿ 72 ಸೇರಿದಂತೆ ಜಿಲ್ಲೆಯಲ್ಲಿ 717 ಪ್ರಕರಣ ದಾಖಲಿಸಿ ಒಟ್ಟು 86,200 ರು. ದಂಡ ವಿಧಿಸ ಲಾಗಿದೆ ಎಂದು ಹೇಳಿದರು.
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಫಲಕಗಳನ್ನು ಆಳವಡಿಸಲಾಗಿದೆಯಲ್ಲದೆ ಭಿತ್ತಿಪತ್ರಗಳ ಮೂಲಕ ನಗರ, ಪಟ್ಟಣ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.ಜಿಲ್ಲಾ ಆರ್.ಸಿ.ಎಚ್. ಡಾ. ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 2739, ಕಡೂರು 558, ತರೀಕೆರೆ 650, ಎನ್.ಆರ್. ಪುರ 260, ಕೊಪ್ಪ 363, ಶೃಂಗೇರಿ 398 ಹಾಗೂ ಮೂಡಿಗೆರೆ 467 ಡೆಂಘೀ ಜ್ವರದ ಲಕ್ಷಣಗಳು ಕಂಡು ಬಂದಿದ್ದು, ಒಟ್ಟು 5, 435 ರೋಗಿಗಳ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಇವುಗಳಲ್ಲಿ 663 ಡೆಂಘೀ ಎಂದು ದೃಢಪಟ್ಟಿದ್ದು 648 ರೋಗಿಗಳು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 15 ಸಕ್ರಿಯ ಡೆಂಘೀ ಪ್ರಕರಣಗಳಿವೆ ಎಂದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ಡಾ. ಬಾಲಕೃಷ್ಣ ಇದ್ದರು.31 ಕೆಸಿಕೆಎಂ 6ತಂಬಾಕು ನಿಯಂತ್ರಣ ಘಟಕ ಹೊರ ತಂದಿರುವ ಜಾಗೃತಿ ಪೋಸ್ಟರ್‌ಗಳನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.