ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ದಿನೇ ದಿನೇ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದೆ.
ಜು. 31ರಂದು ದನಗಳ ಕಾದಾಟಕ್ಕೆ ವೃದ್ಧನೋರ್ವ ಬಲಿಯಾಗಿದ್ದು, ಅವಳಿ ನಗರದ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲಾಡಳಿತ, ನಗರಸಭೆ ದನಗಳ ಹಾವಳಿಗೆ ಕಡಿವಾಣ ಹಾಕದೇ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪ ಕೇಳಿಬರುತ್ತಿದೆ.ಅವಳಿ ನಗರದಲ್ಲಿ ಆಗಾಗ ನಡೆಯುವ ದನಗಳ ಕಾಳಗದಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಬಿಡಾಡಿ ದನಗಳ ಹಾವಳಿ ಸಮಸ್ಯೆ ನಿತ್ಯ ಕಿರಿಕಿರಿ ಉಂಟು ಮಾಡಿದೆ. ಬಿಡಾಡಿ ದನಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಹಲವಾರು ಸಂಘಟನೆಗಳು ನಗರಸಭೆ, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ: ಆ. 1ರಂದು ಜರ್ಮನ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ನೂರಾರು ಬಿಡಾಡಿ ದನಗಳು ಮಲಗಿದ್ದವು. ವಾಹನಗಳ ಹಾರ್ನ್ ಶಬ್ದಕ್ಕೂ ಕದಲುತ್ತಿರಲಿಲ್ಲ. ಯಾವುದೇ ಭಯವಿಲ್ಲದೇ ಮಲಗಿಕೊಂಡಿದ್ದವು. ಜನರಿಗೆ ಈ ಮಾರ್ಗದಲ್ಲಿ ಹೋಗಲು ಭಯವಾಗುತ್ತಿತ್ತು. ಕೆಲವು ವಾಹನ ಸವಾರರು ಮಾರ್ಗ ಬದಲಿಸಿದರು. ಬಿಡಾಡಿ ದನಗಳಿಂದ ಅವಘಡ ನಡೆದಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ತೋಡಿಕೊಂಡರು.ಸ್ಥಳಾಂತರಕ್ಕೆ ಒತ್ತಾಯ: ಅವಳಿ ನಗರದ ಗಾನಯೋಗಿ ಪುಟ್ಟರಾಜ ಗವಾಯಿಗಳವರ ಬಸ್ ನಿಲ್ದಾಣ, ಮಹಾತ್ಮ ಗಾಂಧಿ ಸರ್ಕಲ್, ತಹಸೀಲ್ದಾರ ಕಚೇರಿ, ತೋಂಟದಾರ್ಯ ಮಠ, ಸ್ಟೇಶನ್ ರಸ್ತೆ, ಭೂಮರಡ್ಡಿ ಸರ್ಕಲ್, ಮಹೇಂದ್ರಕರ್ ಸರ್ಕಲ್, ಬೆಟಗೇರಿ ಬಸ್ ನಿಲ್ದಾಣ, ಜರ್ಮನ್ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ನೂರಾರು ಬಿಡಾಡಿ ದನಗಳು ತುಂಬಿರುತ್ತವೆ. ಅವುಗಳ ಕಾದಾಟ, ರಸ್ತೆಯಲ್ಲಿ ಓಡಾಟದಿಂದ ವಾಹನ ಸವಾರರು, ಸಾರ್ವಜನಿಕರಿಗೆ ಸಂಚರಿಸಲು ಕಷ್ಟವಾಗುತ್ತಿದೆ. ಬಿಡಾಡಿ ದನಗಳನ್ನು ಬೇರೆಡೆ ಸ್ಥಳಾಂತರಿಸಲು ಜಿಲ್ಲಾಡಳಿತ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪಶುಪಾಲನೆ ಕೇಂದ್ರಕ್ಕೆ ರವಾನೆ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆ, ಹೆದ್ದಾರಿ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ದನಗಳ ಹಾವಳಿ ಹೆಚ್ಚಾಗಿದೆ. ವಾಹನಗಳ ಸಂಚಾರಕ್ಕೆ ಮತ್ತು ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಅವಘಡಗಳು ಅಪಾಯಗಳು ಜರುಗುತ್ತಿವೆ. ಬೀದಿಗಳಲ್ಲಿ ಬಿಟ್ಟಿರುವ ದನಗಳನ್ನು ಕೂಡಲೇ ಸಂಬಂಧಿಸಿದ ದನಕರುಗಳ ಮಾಲಿಕರು ಆ. 5ರೊಳಗಾಗಿ ತಮ್ಮ ತಾಬಾಕ್ಕೆ ತೆಗೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತರು ಸೂಚಿಸಿದ್ದಾರೆ. ದನಗಳು ನಗರದ ಬೀದಿಗಳಲ್ಲಿ ಸಂಚರಿಸಿದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಂತಹ ಬೀದಿ-ದನಕರಗಳನ್ನು ಹಿಡಿದು ಪಶುಪಾಲನ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆ, ಹೆದ್ದಾರಿ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ದನಗಳ ಹಾವಳಿ ಹೆಚ್ಚಾಗಿದೆ. ವಾಹನಗಳ ರಸ್ತೆ ಸಂಚಾರಕ್ಕೆ ಮತ್ತು ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಅವಘಡಗಳು ಅಪಾಯಗಳು ಜರುಗುತ್ತಿವೆ, ಬೀದಿಗಳಲ್ಲಿ ಬಿಟ್ಟಿರುವ ದನಗಳನ್ನು ಕೂಡಲೇ ಸಂಬಂಧಿಸಿದ ದನಕರುಗಳ ಮಾಲಿಕರು ಆ. 5 ರೊಳಗಾಗಿ ಮಾಲಿಕರು ತಮ್ಮ ವಶಕ್ಕೆ ತೆಗೆದುಕೊಂಡು, ನಗರದ ಬೀದಿಗಳಲ್ಲಿ ಸಂಚರಿಸಿದಂತೆ ನೋಡಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಪ್ರಶಾಂತ ತಿಳಿಸಿದ್ದಾರೆ.