ಚನ್ನರಾಯಪಟ್ಟಣ: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಸಂಜು (೧೭) ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ. ಈತ ಚನ್ನರಾಯಪಟ್ಟಣದ ಕ್ರೈಸ್ತ ದಿ ಕಿಂಗ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ತನ್ನ ಅಜ್ಜಿಯ ಮನೆಯಿಂದ ಸೈಕಲ್ ನಲ್ಲಿ ಕಾಲೇಜಿಗೆ ಬರುತ್ತಿದ್ದ ವೇಳೆ, ಅತಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚನ್ನರಾಯಪಟ್ಟಣದ ಹಾಸ್ಟೆಲ್ ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸಂಜು ವಯಸ್ಸಾದ ಅಜ್ಜಿಯನ್ನು ನೋಡಲು ನಿನ್ನೆ ಅವರ ಮನೆಗೆ ಹೋಗಿದ್ದ. ಗುರುವಾರ ಎಂದಿನಂತೆ ಸೈಕಲ್ ಮೂಲಕ ಕಾಲೇಜಿಗೆಂದು ಬೆಂಗಳೂರು- ಮಂಗಳೂರಿನ ಬೈಪಾಸ್ ಮಾರ್ಗವಾಗಿ ಬರುತ್ತಿದ್ದ ವೇಳೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತವೆಸಗಿದ ಕಾರು ಚಾಲಕ ಆತನಿಗೆ ಚಿಕಿತ್ಸೆ ಕೊಡಿಸಲು ಮುಂದಾಗುವಷ್ಟರಲ್ಲಿ ವಿದ್ಯಾರ್ಥಿ ಕೊನೆ ಉಸಿರೆಳೆದಿದ್ದಾನೆ. ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.