ಸಹಕಾರಿ ಬ್ಯಾಂಕ್‌ ಮೆಟ್ಟಿಲೇರಿದ ಕಾಲೇಜು ವಿದ್ಯಾರ್ಥಿನಿ!

KannadaprabhaNewsNetwork | Published : Jan 23, 2025 12:45 AM

ಸಾರಾಂಶ

ಸಹಕಾರ ಭಾರತಿ ಅಡಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಸ್ವಾತಿ ರೈ, ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಅಂತಿಮ ಬಿಬಿಎ ವಿದ್ಯಾರ್ಥಿನಿ. ಕಡಬ ವಲಯದ ಮಹಿಳಾ ಮೀಸಲು ಕ್ಷೇತ್ರದಿಂದ ಬ್ಯಾಂಕ್‌ಗೆ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಅತ್ಯಂತ ಕಿರಿಯ ಸದಸ್ಯೆ.

ಉಪ್ಪಿನಂಗಡಿ: ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ ಆಡಳಿತ ನಿರ್ದೇಶಕಿಯಾಗಿ ಕಡಬ ಗ್ರಾಮದ ಅರ್ತಿಲದ ಸುಬ್ರಹ್ಮಣ್ಯ ಕೆ‌.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಆಯ್ಕೆಯಾಗಿದ್ದಾರೆ.ಸಹಕಾರ ಭಾರತಿ ಅಡಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಸ್ವಾತಿ ರೈ, ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಅಂತಿಮ ಬಿಬಿಎ ವಿದ್ಯಾರ್ಥಿನಿ. ಕಡಬ ವಲಯದ ಮಹಿಳಾ ಮೀಸಲು ಕ್ಷೇತ್ರದಿಂದ ಬ್ಯಾಂಕ್‌ಗೆ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಅತ್ಯಂತ ಕಿರಿಯ ಸದಸ್ಯೆ.

ಕಡಬ ಗ್ರಾಮದ ಅರ್ತಿಲ ದಿ. ಆನಂದ ರೈ ಮತ್ತು ತಾರಾ ರೈ ದಂಪತಿ ಪುತ್ರಿ ಸ್ವಾತಿ ರೈಗೆ ಈ ಅವಕಾಶ ಅಚಾನಕ್ ಆಗಿ ಬಂದಿದೆ. ಈ ಅವಕಾಶ ಮೊದಲಿಗೆ ತಾಯಿ ತಾರಾ ರೈ ಅವರಿಗೆ ಬಂದಿತ್ತು. ಆದರೆ ಅವರು ತಮ್ಮದೇ ಆದ ಕಾರಣ ನೀಡಿ ಅವಕಾಶವನ್ನು ನಿರಾಕರಿಸಿದ್ದರು. ಸ್ವಾತಿಯ ದೊಡ್ಡಪ್ಪನ ಮಗ, ಹಿಂದೂ ಸಂಘಟನೆಯ ಮುಖಂಡ ಅಜಿತ್ ರೈ ಅವರು ಸ್ವಾತಿಗೆ, ನೀನೇಕೆ ಈ ಅವಕಾಶ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿ ಪ್ರೋತ್ಸಾಹಿಸಿದರು. ಚಿಕ್ಕಪ್ಪ ಚೇತನ್ ರೈ, ಕಡಬ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ. ಇವರೂ ಮಾನಸಿಕ ಧೈರ್ಯ ತುಂಬಿದರು. ಮೊದಲಿಗೆ ಕಾಲೇಜಿನ ಓದಿಗೆ ತೊಂದರೆ ಆಗುತ್ತದೆ ಎಂದಿದ್ದ ಸ್ವಾತಿ ರೈ ಕೊನೆಗೆ ಅವಕಾಶ ಸದುಪಯೋಗ ಮಾಡಿಕೊಳ್ಳಲು ಒಪ್ಪಿಕೊಂಡರು. ಇದೀಗ ಬ್ಯಾಂಕ್‌ನ ಆಡಳಿತ ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾದ್ದಾರೆ..ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾತಿ ರೈ, ಓದಿಗೆ ತೊಂದರೆಯಾದಿತು ಎಂದು ಮೊದಲಿಗೆ ನನಗೆ ಇದೆಲ್ಲಾ ಬೇಡ ಅಂದಿದ್ದೆ. ಮನೆಯವರ ಪ್ರೋತ್ಸಾಹ ಸಿಕ್ಕಿತ್ತು‌. ಬಳಿಕ ಎಲ್ಲ ರೀತಿಯಲ್ಲೂ ಯೋಚಿಸಿ ಅವಕಾಶ ಬಳಸಿಕೊಳ್ಳು ಗಟ್ಟಿ ನಿರ್ಧಾರ ಮಾಡಿಕೊಂಡೆ. ಸಾಧ್ಯವಾದಷ್ಟು ರೈತರಿಗೆ ಸಹಾಯ ಮಾಡುವ ಅವಕಾಶ ಬಂದಿದೆ ಎಂದುಕೊಂಡು ಒಪ್ಪಿಗೆ ಕೊಟ್ಟೆ. ಈಗ ಆಯ್ಕೆಯಾಗಿದೆ. ತುಂಬಾ ಖುಷಿಯಾಗಿದೆ ಎನ್ನುತ್ತಾರೆ.

Share this article