ದಾಬಸ್‍ಪೇಟೆ: ಲಾರಿ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಜನರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಕಾಲಭೈರಸಂದ್ರದ ನಿವಾಸಿ ಸೈಮನ್ (39) ಮೃತಪಟ್ಟ ಕಾರು ಚಾಲಕನಾಗಿದ್ದು, ಶಕೀಲಾ ಮತ್ತು ಇಲಿಯಾಸ್, ಹ್ಯಾಲಿಸೇನ್, ಲಿಯೋ, ಪರಮಾನಂದ, ಸಂತೋಷ್ ರವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಡರಹಳ್ಳಿ ಗೇಟ್ ಬಳಿ ಶನಿವಾರ ಬೆಳಗ್ಗೆ 4:30 ಸುಮಾರಿಗೆ ಚಲಿಸುತ್ತಿದ್ದ ಲಾರಿ ದೀಢೀರನೇ ಬ್ರೇಕ್ ಹಾಕಿದ್ದು, ರೆನಾಲ್ಟ್ ಕಾರು ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಕಾರಿನಲ್ಲಿ ಎಂಟು ಜನರಿದ್ದು ಎಲ್ಲರೂ ದಾಬಸ್‍ಪೇಟೆಯ ಸ್ನೇಹಿತನ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.