ಕಲಘಟಗಿ: ನ್ಯಾ. ನಾಗಮೋಹನದಾಸ ಆಯೋಗದ ವರದಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಬಂಜಾರ (ಲಂಬಾಣಿ) ಭೋವಿ, ವಡ್ಡರ, ಕೊರವ, ಕೊರಚ, ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ಕಲಘಟಗಿ ಘಟಕದ ವತಿಯಿಂದ ಮಂಗಳವಾರ ಬೃಹತ್ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಆಯೋಗದ ವರದಿಯ ವರ್ಗೀಕರಣದಿಂದ 63 ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಆಂಜನೇಯ ಸರ್ಕಲ್ ಬಳಿ ಕೊಲಂಭೋ ಸಮುದಾಯದ ಕಾರ್ಯಕರ್ತರು ಉರುಳು ಸೇವೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಹಸೀಲ್ದಾರ್ ಕಚೇರಿ ತಲುಪಿ ಗ್ರೇಡ್ 2 ತಹಸೀಲ್ದಾರ್ ಬಸವರಾಜ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಬಂಜಾರಾ ಸಮಾಜದ ಮಾಜಿ ಅಧ್ಯಕ್ಷ ಅರ್ಜುನ ಲಮಾಣಿ, ನ್ಯಾಯಮೂರ್ತಿ ನಾಗಮೋಹನದಾಸ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯ ವರ್ಗೀಕರಣದಿಂದ 63 ಸಮುದಾಯಗಳಿಗೆ ಅನ್ಯಾಯವಾಗಲಿದ್ದು, ಇದು ನಮ್ಮ ಮರಣ ಶಾಸನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಗಳು ದಲಿತ ಮತ್ತು ಪರಿಶಿಷ್ಟ ವರ್ಗದವರ ಹಿತಕಾಯುವ ಬದಲು ನಮ್ಮ ನಮ್ಮ ನಡುವೆ ಕಂದಕ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವರದಿಯಲ್ಲಿ 63 ಸಮುದಾಯಗಳಿಗೆ ಶೇ. 5ರಷ್ಟು ಮಾತ್ರ ಮೀಸಲಾತಿ ಒದಗಿಸಲು ಉಲ್ಲೇಖಿಸಿದ್ದು, ಅದನ್ನು ಶೇ. 7ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಕೊಲಂಭೋ ಸಮುದಾಯದ ಮುಖಂಡ ರಾಮಣ್ಣ ಬಂಡಿವಡ್ಡರ ಮಾತನಾಡಿ, ನಮ್ಮ ಸಮಾಜದ ಜನ ಅತಿ ಕೆಳಮಟ್ಟದಲ್ಲಿದ್ದು, ಶಿಕ್ಷಣ ಹಾಗೂ ಆರೋಗ್ಯ, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದಾರೆ. ಸರ್ಕಾರದ ಈ ನಿಯಮದಿಂದ ನಮ್ಮ ಸಮಾಜ ಸಂಪೂರ್ಣ ನಶಿಸಿ ಹೋಗುತ್ತದೆ ಎಂದರು.
ಬಂಜಾರ ಸಂಘದ ತಾಲೂಕು ಅಧ್ಯಕ್ಷ ವಾಸು ಲಮಾಣಿ ಮಾತನಾಡಿ, ಇತಿಹಾಸದಲ್ಲಿ ಒಡೆದಾಳುವ ನೀತಿಯಿಂದ ಇಡಿ ರಾಜ್ಯಗಳೇ ನಾಶವಾಗಿ ಹೋಗಿವೆ. ರಾಜ್ಯ ಸರ್ಕಾರ ಇದೇ ತರಹದ ಧೋರಣೆಯಿಂದ ಸಂಪೂರ್ಣ ಪರಿಶಿಷ್ಟ ಜಾತಿ ಸಮುದಾಯವೇ ನಾಶವಾಗುವ ಸಂಭವವಿದೆ ಎಂದರು.ಕೋರವ ಸಮುದಾಯದ ಮುಖಂಡ ರಾಮಣ್ಣ ಶಿಗ್ಲಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು ನಮ್ಮ ಸಮುದಾಯದವರ ಪಾತ್ರವಿದೆ ಎನ್ನುವುದನ್ನು ಚುನಾಯಿತ ಪ್ರತಿನಿಧಿಗಳು ಗಮನಿಸಬೇಕು ಎಂದರು.
ಆಲ್ ಇಂಡಿಯಾ ಬಂಜಾರ ಸೇವಾದ ಮಂಗಲಪ್ಪ ಲಮಾಣಿ ಮಾತನಾಡಿ, ಮುಖ್ಯಮಂತ್ರಿಗಳು ಅಹಿಂದ ಹೆಸರಲ್ಲಿ ರಾಜಕಾರಣ ಮಾಡಿ ತಮ್ಮ ಹೆಸರನ್ನು ಮಾಡಿದ್ದು, ಮೇಲಿಂದ ಮೇಲೆ ಅಹಿಂದ ಜನಗಳನ್ನು ಒಡೆದು ಆಳುವ ಮೂಲಕ ಪರಿಶಿಷ್ಟರಲ್ಲಿ ಎಡ-ಬಲ, ಅಸ್ಪರ್ಶ-ಸ್ಪರ್ಶ ಎಂದು ಗುರುತಿಸಿ ನಮ್ಮ ಹೆಣಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೊಲಂಭೋ ಸಮಾಜ ಮುಖಂಡ, ಅನೀಲ ಪಮ್ಮಾರ, ಅಲೆಮಾರಿ ಸುಡುಗಾಡು ಸಿದ್ಧರ ಮುಖಂಡ ರಾಜು ದೊಡಮನಿ, ಭೋವಿ ಸಮಾಜದ ತಾಲೂಕಾಧ್ಯಕ್ಷ ನಾಗರಾಜ ಇಟಗಿ ಮಾತನಾಡಿದರು.
ಲಕ್ಷ್ಮಣ ಭೋವಿ, ನಾಗೇಶ ಬಂಡಿವಡ್ಡರ, ಪ್ರಕಾಶ ಲಮಾಣಿ, ಲಕ್ಷ್ಮಣ ಲಮಾಣಿ, ಮೌನೇಶ ಲಮಾಣಿ, ನಿಂಗಪ್ಪ ವಡ್ಡರ, ಧೇನಪ್ಪ ಲಮಾಣಿ, ಪಾಂಡು ಲಮಾಣಿ, ನಿಂಗಪ್ಪ ವಡ್ಡರ, ಶಿವಾಜಿ ವಡ್ಡರ, ದೇವರಾಜ ಲಮಾಣಿ, ಪಾಂಡು ಲಮಾಣಿ, ಸುರೇಶ ಭೋವಿ, ಜೀವನ್ ಲಮಾಣಿ, ಕೃಷ್ಣಾ ರಾಠೋಡ, ನಿಂಗಪ್ಪ ಲಮಾಣಿ, ರಮೇಶ ಭಜಂತ್ರಿ, ರತ್ನಪ್ಪ ಲಮಾಣಿ, ಯಮನಮ್ಮ ಲಮಾಣಿ, ರತ್ನವ್ವ ಲಮಾಣಿ, ನವೀನ ಭಜಂತ್ರಿ, ಶಿವಪ್ಪ ಲಮಾಣಿ, ಶಿವಪ್ಪ ಭಂಜತ್ರಿ, ರವಿ ಹಿಪ್ಪಿಯವರ, ಧೇನು ನಾಯಕ್, ಲಚ್ಚಪ್ಪ ನಾಯಕ್, ಟೋಪಣ್ಣ ಲಮಾಣಿ, ಜೈಭೀಮ ಬಂಜಾರ ಸೇನೆ ಸದಸ್ಯರು ಇದ್ದರು.ಈಗಷ್ಟೆ ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದು, ರಾಜ್ಯ ಸರ್ಕಾದ ಇಬ್ಬಗೆಯ ನೀತಿಯಿಂದ ಬೆಳೆಯುವ ಕುಡಿ ಮೊಳಕೆಯಲ್ಲಿ ಕೊಯ್ದ ಹಾಗೆ ಆಗುತ್ತದೆ ಎಂದು ಬಂಜಾರಾ ಸಮಾಜದ ತಾಲೂಕು ಅಧ್ಯಕ್ಷ ವಾಸು ಲಮಾಣಿ ಹೇಳಿದರು.