ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ: ಹೆಸರು ಮತ್ತು ಉದ್ದಿನ ಬೆಳೆ ಹಾನಿಗಷ್ಟೇ ಸರ್ಕಾರ ಆದೇಶ ಮಾಡಿರುವುದು ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳ ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ಇಲ್ಲಿನ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಸೋಯಾಬಿನ್ ಮತ್ತು ಗೋವಿನಜೋಳದ ಬೆಳೆ ಹಾನಿಯಾಗಿದ್ದು, ರೈತರಿಗೆ ಸರ್ಕಾರದ ಪರಿಹಾರ ಮರೀಚಿಕೆಯಾಗಲಿದೆ.ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ತವರು ಕ್ಷೇತ್ರವಾದ ಕಲಘಟಗಿಯಲ್ಲೇ ರೈತರಿಗೆ ಅನ್ಯಾಯವಾದಂತಾಗಿದೆ. ತಮ್ಮ ನೋವಿಗೆ ಸರ್ಕಾರ ಸ್ಪಂದಿಸುವುದೇ ಎಂಬ ನಿರೀಕ್ಷೆ ಅನ್ನದಾತರದ್ದು.
ಕಲಘಟಗಿ ತಾಲೂಕಿನ ಸುಮಾರು 25 ಸಾವಿರ ಎಕರೆ ಗೋವಿನಜೋಳ ಮತ್ತು ಸುಮಾರು 20 ಸಾವಿರ ಎಕರೆಯಲ್ಲಿ ಸೋಯಾಬಿನ್ ಬಿತ್ತನೆ ಮಾಡಲಾಗಿದೆ. ತಾಲೂಕಿನ ಎತ್ತರದ ಪ್ರದೇಶದಲ್ಲಿನ ಬೆಳೆ ಉತ್ತಮವಾಗಿದೆ. ಆದರೆ, ತಗ್ಗು ಪ್ರದೇಶದ ಬೆಳೆ ಬಹುತೇಕ ಹಾಳಾಗಿದೆ. ತಾಲೂಕು ಆಡಳಿದಿಂದ ಸಮೀಕ್ಷೆ ನಡೆಸಲಾಗಿದೆ. ಆದರೆ, ಬೆಳೆ ಉತ್ತಮವಾಗಿರುವ ಪ್ರದೇಶದಲ್ಲಷ್ಟೇ ಸಮೀಕ್ಷೆ ಮಾಡಲಾಗಿದೆ ಎಂಬ ಆರೋಪ ರೈತ ಮುಖಂಡರದ್ದು.ಸರ್ಕಾರ ಕೇವಲ ಹೆಸರು ಮತ್ತು ಉದ್ದಿನಬೆಳೆ ಸಮೀಕ್ಷೆ ಆದೇಶ ಮಾಡಿ, ಸೋಯಾ ಮತ್ತು ಗೋವಿನ ಜೋಳ ಬೆಳೆದ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ರೈತ ಮುಖಂಡರು.
ಇತ್ತೀಚಿಗಷ್ಟೆ ಕಾಡುಪ್ರಾಣಿಗಳ ದಾಳಿಯಿಂದಾದ ಹಾನಿ ಸಮೀಕ್ಷೆಗೆ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯಪ್ರಭು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿಗೆ ಆಗಮಿಸಿದ್ದರು. ಈ ವೇಳೆ ಬೆಳೆ ಹಾನಿ ಅನುಭವಿಸಿದ ರೈತರು ಮಳೆಯಿಂದ ಅರ್ಧ ಬೆಳೆ ಮತ್ತು ಕಾಡುಪ್ರಾಣಿಗಳಿಂದ ಇನ್ನರ್ಧ ಬೆಳೆ ಹಾನಿಯಾಗಿದೆ ಎಂದು ತಾಲೂಕಿನ ಸಮಸ್ಯೆ ಬಿಚ್ಚಿಟ್ಟದ್ದರು. ಇದೇ ಸಂದರ್ಭದಲ್ಲಿ ರೈತ ಸಂಘಟನೆಗಳ ಮುಖಂಡರು ಸಚಿವರಿಗೆ ಗೋವಿನ ಜೋಳ ಮತ್ತು ಸೋಯಾಬಿನ್ ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ವಿತರಿಸುವಂತೆ ಮನವಿ ಮಾಡಿದ್ದಾರೆ.ಎರಡು ಬಾರಿ ಬಿತ್ತನೆ: ಆರಂಭದಲ್ಲಿ ಮುಂಗಾರು ಉತ್ತಮವಾಗಿ ಸುರಿದಾಗ ಇಲ್ಲಿನ ಬಹುತೇಕ ರೈತರು ಸೋಯಾಬಿನ್ ಬಿತ್ತನೆ ಮಾಡಿದ್ದರು. ಆದರೆ, ಸತತ ಮಳೆಯಿಂದ ಸಸಿ ಹಂತದಲ್ಲೇ ಬೆಳೆ ನಾಶವಾಯಿತು. ಇದಾದ ಬಳಿಕ ರೈತರು ಆ ಬೆಳೆ ನಾಶ ಮಾಡಿ ಮತ್ತೆ ಸೋಯಾಬಿನ್ ಬಿತ್ತನೆ ಮಾಡಿದ್ದಾರೆ. ಆದರೆ, ಎರಡನೇ ಬಾರಿ ಬಿತ್ತಿದ ಬೆಳೆಗೂ ಮಳೆ ಹಾನಿ ಮಾಡಿದೆ. 3 ತಿಂಗಳ ಕಾಲ ಸತತವಾಗಿ ಸುರಿದಿದ್ದರಿಂದ ಬೆಳೆ ಕೊಳೆತು ಹೋಗಿದೆ. ಸೋಯಾ ಎಕರೆಗೆ ₹12ರಿಂದ ₹15 ಸಾವಿರ ಮತ್ತು ಗೋವಿನ ಜೋಳ ₹10ರಿಂದ ₹13 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಲಾಗಿದೆ. ಆದರೀಗ ಬಿತ್ತನೆಗೆ ಮಾಡಿದ ಖರ್ಚೂ ಕೈಗೆ ಬಾರದಂತಾಗಿದೆ ಎಂದು ರೈತರಾದ ಗುರು ಮತ್ತಿಗಟ್ಟಿ, ಬಸವರಾಜ ಕುಸೂರ, ಮಂಜು ಹಸರಂಬಿ, ಪರಶುರಾಮ ಬಿದರಗಡ್ಡಿ ಅಳಲು ತೋಡಿಕೊಳ್ಳತ್ತಾರೆ.
ಸಮೀಕ್ಷೆಗೆ ಆದೇಶವಿಲ್ಲ: ಈ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಸರ್ಕಾರ ಹೆಸರು ಮತ್ತು ಉದ್ದಿನಬೆಳೆ ಸಮೀಕ್ಷೆಗೆ ಮಾತ್ರ ಆದೇಶ ಮಾಡಿದೆ. ನಮ್ಮ ತಾಲೂಕಿನಲ್ಲಿ ಆ ಬೆಳೆಗಳಿಲ್ಲ. ಅಲ್ಲದೆ ಸೋಯಾಬಿನ್ ಮತ್ತು ಗೋವಿನಜೋಳದ ಬೆಳೆಗೆ ಅಷ್ಟೇನೂ ಹಾನಿಯಾಗಿಲ್ಲ. ಶೇ. 30 ಅಧಿಕ ಬೆಳೆ ಹಾನಿಯಾದರೆ ಮಾತ್ರ ಬೆಳೆ ಹಾನಿ ಪರಿಹಾರ ನೀಡಲು ಬರುತ್ತದೆ ಎನ್ನುತ್ತಾರೆ.ಇನ್ನು ರೈತರು ಸಮೀಕ್ಷೆ ಬಂದ ಅಧಿಕಾರಿಗಳು, ಮುಖ್ಯ ರಸ್ತೆಗಳಲ್ಲಿ ಬರುವ ಉತ್ತಮ ಬೆಳೆಗಳನ್ನು ಮಾತ್ರ ಸಮೀಕ್ಷೆ ಮಾಡಿದ್ದಾರೆ. ವಾಸ್ತವದಲ್ಲಿ ಬಹಳಷ್ಟು ಹಾನಿಯಾಗಿದೆ. ಸರ್ಕಾರಿ ಅಧಿಕಾರಿಗಳು ಇದನ್ನು ಮರೆಮಾಚುತ್ತಿದ್ದಾರೆ ಎಂದು ಆರೋಪಿಸುತ್ತಾರೆ.
ಸರ್ಕಾರದ ಆದೇಶ ಮತ್ತು ಅಧಿಕಾರಿಗಳ ಕಣ್ತಪ್ಪಿನಿಂದ ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ಸೋಯಾಬಿನ್ ಮತ್ತು ಗೋವಿನ ಜೋಳ ಬೆಳೆದ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ.ಇಲ್ಲಿನ ಸೋಯಾಬಿನ್ ಮತ್ತು ಗೋವಿನಜೋಳ ಬೆಳೆ ಹಾನಿಯಾಗಿರುವ ಕುರಿತಂತೆ ಇತ್ತೀಚಿಗೆ ತಾಲೂಕಿಗೆ ಆಗಮಿಸಿದ್ದ ಸಚಿವರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಸರ್ಕಾರ ಸೋಯಾಬಿನ್ ಮತ್ತು ಗೋವಿನಜೋಳದ ಬೆಳೆ ಸಮೀಕ್ಷೆ ಮಾಡಿ ಪರಿಹಾರ ಒದಗಿಸಬೇಕು. ಬರೀ ಹೆಸರು, ಉದ್ದಿನ ಸಮೀಕ್ಷೆ ಮಾಡಿ ಪರಿಹಾರ ನೀಡಿದರೆ ಈ ಭಾಗದ ರೈತರಿಗೆ ಅನ್ಯಾಯವಾಗಲಿದೆ. ಈಗಲೂ ಕಾಲ ಮಿಂಚಿಲ್ಲ ಸಮೀಕ್ಷೆ ಮಾಡಿ ಪರಿಹಾರ ಒದಗಿಸಲಿ ಎಂದು ಪ್ರಗತಿಪರ ರೈತ ಪರಶುರಾಮ ಎತ್ತಿನಗುಡ್ಡ ಹೇಳಿದರು.ಬೇರೆ ತಾಲೂಕಿನಲ್ಲಿ ಹೆಸರು ಮತ್ತು ಉದ್ದಿನ ಬೆಳೆ ಸಮೀಕ್ಷೆಗೆ ಆದೇಶ ಮಾಡಲಾಗಿದೆ. ಕಲಘಟಗಿ ತಾಲೂಕಿನಲ್ಲಿ ಆ ಬೆಳೆಗಳಿಲ್ಲ. ಇನ್ನು ತಾಲೂಕಿನಲ್ಲಿ ಶೇ. 30ಕ್ಕಿಂತ ಕಡಿಮೆ ಹಾನಿಯಾಗಿದೆ. ನಾವೂ ಕ್ಷೇತ್ರ ಸಮೀಕ್ಷೆ ಮಾಡಿದ್ದೇವೆ. ಶೇ. 10ರಿಂದ ಶೇ. 15ರಷ್ಚು ಮಾತ್ರ ಹಾನಿಯಾಗಿದೆ. ಇದನ್ನು ಸ್ಥಳೀಯವಾಗಿ ಬೆಳೆ ವಿಮೆಯಲ್ಲಿ ಪರಿಹಾರ ಒದಗಿಸಿಕೊಡಲಾಗುವುದು ಎಂದು ಕಲಘಟಗಿ ತಹಸೀಲ್ದಾರ್ ಬಸವರಾಜ ಹೊನಕನ್ನವರ ಹೇಳಿದರು.