ಕನ್ನಡಪ್ರಭ ವಾರ್ತೆ ಮಂಡ್ಯ
೩೦ ಗ್ರಾಮಗಳಲ್ಲಿ ನೂರಾರು ಮಹಿಳೆಯರು ವಿವಿಧ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಇಡೀ ಗ್ರಾಮಗಳಿಗೆ ಕಳೆತಂದರು. ಈ ಸ್ಪರ್ಧೆಯಲ್ಲಿ ೧೮ ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸಲು ಅವಕಾಶ ನೀಡಿದ್ದರಿಂದ ೧೮ ರಿಂದ ೮೦ ವರ್ಷದವರೆಗಿನ ಮಹಿಳೆಯರು ಭಾಗವಹಿಸಿ ರಂಗೋಲಿ ಬಿಡಿಸಿ, ಬಣ್ಣ ಹಚ್ಚಿ ತಮ್ಮ ಮನೆಯ ಹಬ್ಬದಂತೆ ಖುಷಿಪಟ್ಟರು.
ಇಡೀ ರಾಜ್ಯದಲ್ಲಿ ಒಂದೇ ಬಾರಿಗೆ ೩೦ ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು ಇದೇ ಪ್ರಥಮವಾಗಿದ್ದು, ಇದು ದಾಖಲೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಶಾಸಕ ಪಿ.ರವಿಕುಮಾರ್. ಸದಾ ಹೊಸದನ್ನು ಬಯಸುವ ಅವರು ಬೂದನೂರು ಉತ್ಸವಕ್ಕೆ ಮೆರುಗು ನೀಡಲು ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಯಶಸ್ವಿಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶಾಸಕ ರವಿಕುಮಾರ್ ಅವರೇ ಉಡುಗೊರೆ ನೀಡಿದ್ದರು.ಎಲ್ಲರಿಗೂ ಸಮಾಧಾನಕರ ಬಹುಮಾನ:
ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ರೀತಿಯ ರಂಗೋಲಿಗಳಾದ ಬೂದನೂರು ಉತ್ಸವದ ಲೋಗೋ, ಕಾಂತಾರ, ೩ಡಿ ರಂಗೋಲಿ ಮತ್ತು ಗೃಹಲಕ್ಷ್ಮೀ ಯೋಜನೆಯ ಕುರಿತು ಮಾಹಿತಿ ನೀಡುವಂತಹ ವಿವಿಧ ರೀತಿಯ ರಂಗೋಲಿ ಬಿಡಿಸಿರುವುದನ್ನು ವೀಕ್ಷಣೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದರು.