ದೊಡ್ಡಬಳ್ಳಾಪುರ: ಮನುಷ್ಯರಿಗೆ ಮನುಷ್ಯನೇ ಆದರ್ಶವಾಗಬೇಕೆ ಹೊರತು, ಕಾಣದ ದೇವರಲ್ಲ. ನಾವು ದೇವರಿಲ್ಲದ ಬುದ್ಧನ ಆಧ್ಯಾತ್ಮದ ಕಡೆಗೆ ಚಲಿಸಬೇಕಿದೆ. ಇದು ಮಾತ್ರವೇ ಸಮಾಜವನ್ನು ಮೌಢ್ಯರಹಿತವಾಗಿ ಮುನ್ನಡೆಸುತ್ತದೆ ಎಂದು ವಿಜ್ಞಾನದ ಬರಹಗಾರ ಡಾ.ಎ.ಓ.ಆವಲಮೂರ್ತಿ ಅಭಿಪ್ರಾಯಪಟ್ಟರು.
ಶಿವ ಕಾವ್ಯದ ಕಣ್ಣು ಎಂಬ ವಿಚಾರದಡಿ ಮಾತನಾಡಿದ ಪತ್ರಕರ್ತ ಕೆ.ವೆಂಕಟೇಶ್, ಶಿವ ಸೀಮಾತೀತ ವ್ಯಕ್ತಿತ್ವ. ಮಾನವ ಬದುಕಿನ ಸಂವೇದನೆಗೆ ತುಂಬಾ ಹತ್ತಿರದವನಾಗಿದ್ದು, ಎಲ್ಲರಲ್ಲೂ ಶಿವತ್ವ ಇರುತ್ತದೆ ಎಂದು ತಿಳಿಸಿದರು.
ನನ್ನ ಲೋಕದ ಶಿವ ಎಂಬ ವಿಚಾರ ಮಾತನಾಡಿದ ಚಿಂತಕ ನಾರಾಯಣ್ ಕ್ಯಾಸಂಬಳ್ಳಿ, ದೇವರನ್ನು ಶೋಷಣೆಗೆ ಬಳಸಬಾರದು. ಈ ವಿಚಾರದಲ್ಲಿ ದೇವರನ್ನು ಮೀರಿದ ನೈತಿಕತೆಯತ್ತ ಮನುಷ್ಯ ಸಮಾಜ ಚಲಿಸಬೇಕು. ಸ್ಥಾವರದ ದೇವರುಗಳು ಈ ವಿಚಾರದಲ್ಲಿ ತುಂಬಾ ಅಪಾಯವನ್ನು ತಂದೊಡ್ಡುತ್ತಿವೆ ಎಂದು ಅಭಿಪ್ರಾಯಪಟ್ಟರು.ಪ್ರಾಧ್ಯಾಪಕ ಡಾ. ಪ್ರಕಾಶ್ ಮಂಟೇದ ಮಾತನಾಡಿ, ಶಿವನನ್ನು ಧಾರ್ಮಿಕ ಸಂಸ್ಥೆಗಳು ಹಾಗೂ ಸಂಪ್ರದಾಯಸ್ಥರಿಂದ ಬಿಡುಗಡೆಗೊಳಿಸಿ, ಶಿವತತ್ವವನ್ನು ಜನತತ್ವವನ್ನಾಗಿಸಿ ಸರ್ವೋದಯದತ್ತ ಜನ ಸಾಗುವಂತೆ ಮಾಡಬೇಕಿದೆ. ಈ ಕಾರಣದಿಂದಲೇ ನಾವು ಶಿವ ಸಂಸ್ಕೃತಿಯನ್ನು ಇಂದು ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಆರ್ ನಾಗರಾಜ್ ಬಳಗದ ಸದಸ್ಯರು, ಶ್ರೀನಿವಾಸ್ ಕಾರಹಳ್ಳಿ, ದೇವನಹಳ್ಳಿಯ ತೇಜಸ್ವಿ ಬಳಗದ ಸದಸ್ಯರು ಪಾಲ್ಗೊಂಡಿದ್ದರು.
ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಶಿವ ಕಾವ್ಯದ ಕಣ್ಣು ಬಯಲ ಶಿವ ಕಾವ್ಯ ಜಾಗರ ಕಾರ್ಯಕ್ರಮ ನಡೆಯಿತು.