ಕನ್ನಡಪ್ರಭ ವಾರ್ತೆ ಆಲೂರು
ಸೆ. ೨೨ರಿಂದ ಈ ಸಂದರ್ಭದಲ್ಲಿ ಶ್ರೀ ರಂಗನಾಥಸ್ವಾಮಿ (ಶ್ರೀ ತಿರುಮಲ) ದೇವರನ್ನು ಒಂಭತ್ತು ದಿನಗಳ ಕಾಲ ಗ್ರಾಮದ ಪಟ್ಟದಲ್ಲಿ ಕುಳ್ಳಿರಿಸಿ, ಪ್ರತಿದಿನ ಬೆಳಗ್ಗೆ ಸಂಜೆ ಪೂಜಾ ವಿಧಿ ವಿಧಾನಗಳು ಜರುಗಿದವು. ಪ್ರತಿದಿನ ಸೇವಾರ್ಥದಾರರು ಅನ್ನದಾಸೋಹ ನೆರವೇರಿಸಿದರು. ಹತ್ತನೆ ದಿನವಾದ ವಿಜಯದಶಮಿಯಂದು ಪಟ್ಟಕ್ಕೆ ಕುಳಿತಿದ್ದ ಮೆರೆ ದೇವರನ್ನು ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಇರುವ ಬನ್ನಿ ಮಂಟಪಕ್ಕೆ ಕರೆ ತಂದು ಕೂರಿಸಿದರು. ಬನ್ನಿ ಮಂಟಪದ ಮುಂದೆ ಬನ್ನಿಸೊಪ್ಪು, ಬಾಳೆಕಂದನ್ನು ನೆಟ್ಟು, ಮೊದಲು ಪಟೇಲ ವಂಶಸ್ಥರಾದ ಎಂ. ಕೆ. ಸುಪ್ರೀತ್ ಬಿಲ್ಲು ಬಾಣದಿಂದ, ನಂತರ ವಿಶ್ವಕರ್ಮ ವಂಶಸ್ಥರಾದ ಎಂ. ಪಿ. ಹರೀಶ್ ಬಂದೂಕಿನಿಂದ ಗುರಿಯಿಟ್ಟು ಗುಂಡು ಹಾರಿಸಿ ಬನ್ನಿಕಂಬವನ್ನು ತುಂಡು ಮಾಡಿದರು.
ಸ್ಥಳದಲ್ಲಿ ನೆರೆದಿದ್ದ ಪ್ರತಿಯೊಬ್ಬ ಭಕ್ತರು ಬನ್ನಿಸೊಪ್ಪನ್ನು ಪರಸ್ಪರರಿಗೆ ಕೊಟ್ಟು ತೆಗೆದುಕೊಂಡು ಶುಭಾಶಯ ವಿನಿಮಯ ಮಾಡಿಕೊಂಡು ಪುನೀತರಾದರು. ಮೂಲ ದೇವಸ್ಥಾನದಲ್ಲಿ ಶ್ರೀ ರಂಗನಾಥಸ್ವಾಮಿ ದೇವರಿಗೆ ಬೆಳ್ಳಿ ಅಲಂಕಾರ ಮಾಡಿ ಮಹಾಮಂಗಳಾರತಿ ನಡೆಯಿತು. ನಂತರ ಮೆರೆ ದೇವರು ಗ್ರಾಮದಲ್ಲಿ ಸಂಚರಿಸಿ ಭಕ್ತರು ಪೂಜೆ ಸಲ್ಲಿಸಿದ ನಂತರ ದಸರಾ ಹಬ್ಬಕ್ಕೆ ನಾಂದಿ ಹಾಡಲಾಯಿತು.ಪಟ್ಟಣ ಪಂಚಾಯತಿ ಸದಸ್ಯರಾದ ಧರ್ಮ, ನಿಂಗರಾಜು(ಪಾಪು) ಭಾಗವಹಿಸಿದ್ದರು. ಪ್ರಧಾನ ಅರ್ಚಕ ರವಿಕುಮಾರ್, ಧನಂಜಯ್, ಪುರುಷೋತ್ತಮ, ರಂಗಸ್ವಾಮಿ, ರಂಗನಾಥ್, ಲಕ್ಷ್ಮೀಕಾಂತ ಮತ್ತು ಉಡುಸಲಮ್ಮದೇವಿ ಅರ್ಚಕರಾದ ವೀರೇಶ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.