ಭವ್ಯ ಭವಿಷ್ಯದ ನಾಳೆಗಾಗಿ ಶಾಲೆಗೆ ಬನ್ನಿ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Jun 06, 2025, 01:14 AM IST
ಶಾಲೆಯಿಂದ ಹೊರಗುಳಿದ 7 ಮಕ್ಕಳನ್ನು ತಮ್ಮ ವಾಹನದಲ್ಲಿಯೇ ಶಾಲೆಗೆ ಕರೆ ತಂದ ಸಚಿವ ಎಚ್.ಕೆ.ಪಾಟೀಲ.  | Kannada Prabha

ಸಾರಾಂಶ

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ಬಿಟ್ಟ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ಬಿಟ್ಟ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗೂ ಗದಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಸಿದ್ಧಲಿಂಗನಗರದ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ಧಲಿಂಗ ನಗರದ ಪ್ರೌಢಶಾಲೆ ಆವರಣದಲ್ಲಿ ಜರುಗಿದ ಭವ್ಯ ಭವಿಷ್ಯದ ನಾಳೆಗಾಗಿ ಶಾಲೆಗೆ ಬನ್ನಿ ಘೋಷವಾಕ್ಯದಡಿ ಏರ್ಪಡಿಸಿದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶ ಶ್ರೇಷ್ಠವಾಗಲು ಎಲ್ಲರೂ ಶಿಕ್ಷಣವಂತರಾಗುವ ಜತೆಗೆ ಸುಶಿಕ್ಷಿತರಾಗಬೇಕು. ಶಾಲೆಯಿಂದ ಹೊರಗುಳಿದ 6-14 ವಯೋಮಾನದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಮೂಲಕ ಶಿಕ್ಷಣ ನೀಡಬೇಕು. ಮಕ್ಕಳೆಲ್ಲರೂ ತಮ್ಮ ಭವ್ಯ ಭವಿಷ್ಯ ನಿರ್ಮಾಣಕ್ಕಾಗಿ ಶಾಲೆಗೆ ಬನ್ನಿ. ಎಲ್ಲ ಮಕ್ಕಳನ್ನು ಶಿಕ್ಷಣವಂತರಾಗಿಸುವುದು ಸರ್ಕಾರದ ಕಾಳಜಿ. ಎಲ್ಲರಿಗೂ ವಿದ್ಯೆ ಕಲಿಸಿ, ಘನತೆಯುತ ಜೀವನ ರೂಪಿಸುವ ಸದುದ್ದೇಶ ಶಿಕ್ಷಣ ನೀಡುವುದರಲ್ಲಿದೆ. ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ವಿಷ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಮಕ್ಕಳು ಶಿಕ್ಷಣವಂತರಾಗಿಸುವಲ್ಲಿ ಸರ್ಕಾರದೊಂದಿಗೆ ನಾಗರಿಕ ಹೊಣೆಗಾರಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಭವಿಷ್ಯ ಶಾಲೆಯಲ್ಲಿ ಸುರಕ್ಷಿತವಾಗಲಿದೆ. ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಲು ಶಾಲೆ ಸದಾ ಸಿದ್ಧವಾಗಿವೆ. ಮರಳಿ ಶಾಲೆಗೆ ಬರುವ ಮೂಲಕ ಕಲಿತು ಬೆಳೆಯಬೇಕು ಎಂದು ತಿಳಿಸಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿಡಿಪಿಐ ಆರ್.ಎಸ್.ಬುರುಡಿ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವೇದಿಕೆಯಲ್ಲಿ ಹೂಗುಚ್ಛ ನೀಡಿ ಸಚಿವರು, ಶಾಸಕರು, ಗಣ್ಯರು ಸ್ವಾಗತಿಸಿದರು. ಇಲಾಖೆಯಿಂದ ಹೊರತರಲಾದ ಕರಪತ್ರಗಳ ಬಿಡುಗಡೆ ಮಾಡಲಾಯಿತು. ಜೊತೆಗೆ ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಶಾಲಾ ಸಮವಸ್ತ್ರ ವಿತರಣೆ ಜರುಗಿತು.ಭವ್ಯ ಭವಿಷ್ಯದ ನಾಳೆಗೆ ಬನ್ನಿ ಬನ್ನಿ ಶಾಲೆಗೆ ಕಾರ್ಯಕ್ರಮದ ಅಂಗವಾಗಿ ಸಚಿವ ಎಚ್.ಕೆ. ಪಾಟೀಲ ಅವರು ಗದಗನ ರಾಮನಗರದಲ್ಲಿನ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡುವ ಮೂಲಕ ಶಾಲೆಯಿಂದ ಹೊರಗುಳಿದ ಏಳು ಮಕ್ಕಳನ್ನು ತಮ್ಮ ಕಾರಿನಲ್ಲಿ ಶಾಲೆಗೆ ಕರೆತರುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಗುಣಮಟ್ಟದ ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಕರೆತರಲು ಜಿಲ್ಲೆಯಾದ್ಯಂತ ಭವ್ಯ ಭವಿಷ್ಯದ ನಾಳೆಗೆ ಬನ್ನಿ ಬನ್ನಿ ಶಾಲೆಗೆ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ.ಪಾಟೀಲ ಅವರ ನೇತೃತ್ವದಲ್ಲಿ ಗದಗ ಶಹರ ವಲಯದಲ್ಲಿ ಜಾಗೃತಿ ಆಂದೋಲನ ಮಾಡುವ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಡಿಡಿಪಿಐ ಆರ್.ಎಸ್. ಬುರುಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ