ಧಾರವಾಡ: ಮಾನವ ಕುಲದ ಆರೋಗ್ಯಕರ ಬದುಕಿಗೆ ಆಸರೆ ನೀಡಿ, ಪೋಷಿಸಿ, ಬೆಳೆಸುವ ಭೂಮಿ, ನೀರು ಸಸ್ಯಕಾಶಿ ಸೇರಿದಂತೆ ಎಲ್ಲ ರೀತಿಯ ಪರಿಸರದ ಬಗ್ಗೆ ಪ್ರೀತಿ, ಅಭಿಮಾನಗಳನ್ನು ಮಕ್ಕಳಲ್ಲಿ ಶಾಲಾ ಹಂತದಲ್ಲಿಯೇ ಬೆಳೆಸಬೇಕು. ಎಲ್ಲದಕ್ಕೂ ಮೀಗಿಲಾಗಿ ಪ್ರತಿ ಮಗುವಿನಲ್ಲಿ ನಾಗರಿಕ ಪ್ರಜ್ಞೆ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಪ್ರಸ್ತುತ ಪರಿಸರದ ಬಗ್ಗೆ ಕಾಳಜಿ, ಪರಿಸರ ಪ್ರಜ್ಞೆ ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ. ಪರಿಸರ ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕು. ಏಕಬಳಕೆ ಪ್ಲಾಸ್ಟಿಕ್ ಬಳಸಲು ಜನರಲ್ಲಿ ಜಾಗೃತಿ ಮೂಡಿಸಬೇಕು. ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸದಂತೆ ಎಲ್ಲೆಡೆ ಜನಜಾಗೃತಿ ಕಾರ್ಯ ಮಾಡಬೇಕು ಎಂದರು.
ಭೂಮಿಯ ಮಣ್ಣು, ನೀರು, ಗಾಳಿ ಮತ್ತು ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಮಣ್ಣು, ನೀರು, ಗಾಳಿ ಆರೋಗ್ಯವಾಗಿದ್ದರೆ, ನಾವು ಆರೋಗ್ಯವಾಗಿರುತ್ತೇವೆ. ಅವು ಮಲಿನವಾಗದಂತೆ ನಾವೆಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ, ಮನುಷ್ಯನ ಸ್ವಾರ್ಥಕ್ಕೆ ನೈಸರ್ಗಿಕ ಸಂಪನ್ಮೂಲಗಳು ಅತಿಯಾದ ಬಳಕೆ ಆಗುತ್ತಿವೆ. ಅರಣ್ಯನಾಶ ತಡೆಗಟ್ಟಬೇಕು. ಹೆಚ್ಚು ಸಸಿಗಳನ್ನು ನೆಡಬೇಕು. ಪರಿಸರದ ಸಮತೋಲನ ಕಾಪಾಡಬೇಕು ಎಂದರು.ಪ್ರತಿ ಮನೆಯಲ್ಲಿ ಹಬ್ಬಹರಿದಿನಗಳು, ಹುಟ್ಟುಹಬ್ಬದ ದಿನಗಳು, ಕುಟುಂಬ ಕಾರ್ಯಕ್ರಮಗಳ ದಿನಗಳಂದು ಒಂದು ಸಸಿ ನೆಡುವ ಪರಂಪರೆ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಶ್ರೀಶೈಲ ಕರಿಕಟ್ಟಿ ಸ್ವಾಗತಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಜಗದೀಶ ಐ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಚ್. ನಾಯಕ್ ನಿರೂಪಿಸಿದರು. ವಿ.ವಿ. ಕಟ್ಟಿ, ಬಸವರಾಜ ಕಡಕೋಳ, ಭಾಗೀರತಿ ತಲಕಾಂಬಕರ್, ಎಸ್.ಎನ್. ಸಾವಳಗಿ, ಎಂ.ವಿ. ಅಡಿವೆರ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ಎಸ್.ಎಂ. ಹುಡೇದಮನಿ, ಡಾ. ರೇಣುಕಾ ಅಮಲಜೇರಿ, ಎಸ್.ಎನ್. ಪೂಜಾರ್ ಇದ್ದರು.