- ಕೈದಾಳೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮೆಚ್ಚುಗೆ । ಮೊಬೈಲನ್ನು ಜ್ಞಾನವೃದ್ಧಿಗಾಗಿ ಬಳಸಬೇಕು ಎಂದು ಸಲಹೆ - - -
ಬಡ, ಮಧ್ಯಮ ವರ್ಗ, ಗ್ರಾಮೀಣ ಮಹಿಳೆಯರಲ್ಲಿ ಜ್ಞಾನ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯನ್ನು ಹೆಚ್ಚಿಸುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಕೈದಾಳೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಹಿಳೆಯರ ಸ್ವಾವಲಂಬಿ ಬದುಕನ್ನು ಕಾಣುತ್ತಿದ್ದೇವೆ ಎಂದರು.ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ದೊಡ್ಡ ಕೊಡುಗೆ ನೀಡುತ್ತಿದೆ. ಮಹಿಳೆಯರನ್ನು ಸಂಘಟಿಸಿ, ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬಳಕೆ ಅಗತ್ಯವಾದರೂ, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕುಟುಂಬದ ಮೌಲ್ಯಗಳನ್ನು ಯಾರೂ ಸಹ ಮರೆಯಬಾರದು. ಮೊಬೈಲನ್ನು ಜ್ಞಾನವೃದ್ಧಿಗಾಗಿ ಬಳಸಬೇಕು. ಮಕ್ಕಳೊಂದಿಗೆ ಹಾಗೂ ಹಿರಿಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಮೂಲಕ ಕುಟುಂಬದ ಸಂಬಂಧಗಳನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಜ್ಞಾನವಿಕಾಸ ಕೇಂದ್ರದ ಸದಸ್ಯೆ ಮಂಜುಳಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಜಿಲ್ಲಾ ನಿರ್ದೇಶಕರಾದ ಎಂ.ಲಕ್ಷ್ಮಣ, ವೈ.ಟಿ. ಮಲ್ಲಿಕಾರ್ಜುನ, ವೈ.ಆರ್. ಮಲ್ಲಿಕಾರ್ಜುನ ಸೇರಿದಂತೆ ಯೋಜನೆ ಪದಾಧಿಕಾರಿಗಳು, ಸಿಬ್ಬಂದಿ, ಕೈದಾಳೆ ಗ್ರಾಮಸ್ಥರು, ಮಹಿಳೆಯರು ಉಪಸ್ಥಿತರಿದ್ದರು.
(ಕೋಟ್) ಮಹಿಳೆಯರ ಆತ್ಮವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ಜ್ಞಾನ ವಿಕಾಸ ಕೇಂದ್ರದ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿರುವುದನ್ನು ಶ್ಲಾಘನೀಯವಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಸದಾ ಇರಲಿದೆ. ಸಂಸ್ಥೆಯ ಇಂತಹ ಸಮಾಜಮುಖಿ ಕಾರ್ಯಗಳಿಂದಾಗಿ ನಾಡಿನ ಲಕ್ಷಾಂತರ ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಎಲ್ಲರ ಮೇಲೂ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ಇರಲಿ.
- - -