ಒಳಮೀಸಲಾತಿಗೆ ಅವಿಶ್ರಾಂತ ಹೋರಾಟ ಇರಲಿ

KannadaprabhaNewsNetwork |  
Published : Oct 01, 2026, 01:30 AM IST
ಚಿತ್ರದುರ್ಗದಲ್ಲಿ ಮಾದಿಗ ಮುನ್ನೆಡೆ ಸಮಾವೇಶಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ಮಾದಿಗ ಮುನ್ನೆಡೆ ಸಮಾವೇಶಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿ ಒಳಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವವರೆಗೆ ಹೋರಾಟ ಅವಿಶ್ರಾಂತವಾಗಿ ನಡೆಯಬೇಕು. ಒಳಮೀಸಲಾತಿ ಸಂಪೂರ್ಣ ಜಾರಿಗೆ ಬರುವವರೆ ನನಗೆ ಸಮಾಧಾನ ಇಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ ಸೇವಾ ಸಂಕಲ್ಪದ ಅಂಗವಾಗಿ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಒಳ ಮೀಸಲಾತಿ ಕಗ್ಗಂಟು ಬಿಡಿಸಿದ ಮೋದಿ, ಮಾದಿಗ ಮುನ್ನಡೆ ಕಾರ್ಯಕರ್ತರ‌ ಸಮಾವೇಶದಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಅವರು‌ ಮನಸ್ಸು ಮಾಡದಿದ್ದರೆ ಮೀಸಲಾತಿ‌ ಹಂಚಿಕೆ ಅಧಿಕಾರ ರಾಜ್ಯಗಳಿಗೆ ಬರುತ್ತಿರಲಿಲ್ಲ. ಕೇಂದ್ರ ಸರ್ಕಾರದ ನಿಲುವಿನಿಂದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದರು.

ಮುಂದೊಂದು ದಿನ ಮೀಸಲಾತಿ ಹೆಚ್ಚಳ ಆಗಲೇಬೇಕಿದೆ.‌ ಜನಸಂಖ್ಯೆ ಅನುಪಾತದಲ್ಲಿ ಮೀಸಲಾತಿ ಹೆಚ್ಚಳ ಆಗಬೇಕು ಎಂದು‌ ಸಂವಿಧಾನ ಹೇಳಿದೆ. ಆದರೆ, ಕಾಂಗ್ರೆಸ್ಸಿನವರು ಶೇ.15ರಷ್ಟು‌ ಮೀಸಲಾತಿ ಇಟ್ಟು ಹಲವು ಜಾತಿಗಳನ್ನು ಮೀಸಲಾತಿಗೆ ಸೇರಿಸುತ್ತಾ ಸೇರಿಸುತ್ತಾ ಹೋದರು. ಈ ಅನ್ಯಾಯಕ್ಕೆ ನ್ಯಾಯ ಕೊಟ್ಟವರು ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ. ನಾನು ಮುಖ್ಯಮಂತ್ರಿ ಆಗಿದ್ದಾಗ ಒಳಮೀಸಲಾತಿ ಘೋಷಣೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದರು.

ನೀವು ಒಳಮೀಸಲಾತಿ ಹಾಳು‌ ಮಾಡಿದವರಿಗೆ ಸನ್ಮಾನ ಮಾಡಿದ್ದೀರಿ, ಸನ್ಮಾನ ಮಾಡಿಸಿಕೊಂಡವರಿಗೆ ಆತ್ಮಸಾಕ್ಷಿ ಇಲ್ಲ. ಅವರು ಈಗ ಒಳಮೀಸಲಾತಿ ಜಾರಿಯಾಗಬೇಕು ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

ನಾವು‌ ಶೋಷಿತರು ಎಂದು ಹೇಳಬೇಡಿ, ನೀವು ಈ ದೇಶದ ಮಾಲಿಕರು, ನಿಮಗೆ ನಿಮ್ಮ ಹಕ್ಕುಗಳನ್ನು ಕೇಳುವ ಧೈರ್ಯ ಬರಬೇಕು. ನಾವು ಸ್ವಾಭಿಮಾನಿಗಳು ನಮ್ಮ ಪಾಲು ನಮಗೆ ಕೊಡಿ ಎಂದು‌ ಕೇಳಿ ಎಂದು ಸಲಹೆ ನೀಡಿದರು.

ಶ್ರೀಮಂತ ಮುಖ್ಯಮಂತ್ರಿ ರಾಜ್ಯ ಬಡವಾಗಿದೆ. ಜನ ಬರ, ಬಡತನದ ಬೇಗುದಿಯಲ್ಲಿ‌ ಸಿಲುಕಿದ್ದಾರೆ, ಆದರೆ, ಮುಖ್ಯಮಂತ್ರಿ ಅತ್ಯಂತ ಶ್ರೀಮಂತರಾಗಿದ್ದಾರೆ. ಜನ ಉತ್ತಮ ಜೀವನ ನಡೆಸಬೇಕೆ ಅಥವಾ ಕೆಲವೇ ಕೆಲವರು ಶ್ರೀಮಂತಿಕೆ ಜೀವನ‌ ನಡೆಸಬೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ನನ್ನ ಬಳಿ ಸಾವಿರ ಕೋಟಿ ಇದೇ, ನಿನ್ನ ಬಳಿ ಎರಡು ಸಾವಿರ ಕೋಟಿ ಇದೆ ಎಂದು ಪೈಪೋಟಿ ನಡೆಯುತ್ತಿದೆ. ರಾಜ್ಯದ ಸಂಪತ್ತು ಕೆಲವೇ ಕೆಲವರ ಮನೆ ಸೇರುತ್ತಿದ್ದರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಎಂದು ಪ್ರಶ್ನಿಸಿದರು.

*ಮೌನ ಮಾದಿಗ ಸಮಾಜದ ದೌರ್ಬಲ್ಯ ಅಲ್ಲ: ಬೊಮ್ಮಾಯಿ

ಮೀಸಲಾತಿ ಯಾಕೆ ಎಂದು ಕೇಳುವವರು ನಿಮ್ಮ‌ ಆಸ್ತಿ, ಅಂತಸ್ತು ಎಲ್ಲವನ್ನೂ ಬಿಟ್ಟು ದಲಿತ ಕೇರಿಯಲ್ಲಿ ವಾಸ ಮಾಡಿ ಆಗ ಗೊತ್ತಾಗುತ್ತದೆ. ಅಲ್ಲಿನ ಪರಿಸ್ಥಿತಿ, ಮನಸ್ಥಿತಿ ಅರಿಯಿರಿ, ಹುಟ್ಟುತ್ತಲೇ ಕೀಳರಿಮೆ ಬೆಳೆಯುತ್ತದೆ. ಅದನ್ನು ತೊಡೆದು ಹಾಕುವುದು ಕಷ್ಟ ಎಂದು ದಲಿತರ ಕಷ್ಟಗಳನ್ನು ವಿವರಿಸಿದರು.

ಡಿ.ಕೆ.ಶಿವಕುಮಾರ್ ಯಾವ ಪುರುಷಾರ್ಥಕ್ಕೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದೀರಿ, ಶೋಷಿತ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ಬೇಡವೇ, ಯಾಕೆ ನಾಟಕ ಆಡುತ್ತಿದ್ದೀರಿ, ಮೌನ ಮಾದಿಗ ಸಮಾಜದ ದೌರ್ಬಲ್ಯ ಅಲ್ಲ ಎಂದು ವಾಗ್ದಾಳಿ ಮಾಡಿದರು. ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಅವರು ನಿಮ್ಮ‌ ಸಮಾಜಕ್ಕೆ ಹಕ್ಕು ಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ನಿಂದ ಶೋಷಿತ ಸಮುದಾಯಗಳಿಗೆ ಅನ್ಯಾಯ: ಬಿ.ವೈ.ವಿಜಯೇಂದ್ರ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಪ‌ಮಾಡುವ ಕಾಂಗ್ರೆಸ್ಸಿಗರು ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ, ಅವರು ಚುನಾವಣೆಗೆ ನಿಂತಾಗ ಎರಡು‌ ಬಾರಿ‌ ಸೋಲಿಸಿದರು. ಮಾದಿಗ ಸಮಾಜದ ಜೊತೆಗೆ ನೂರ ಒಂದು ಸಮಾಜಗಳಿಗೆ ನ್ಯಾಯ ಕೊಡಲು ಗಟ್ಟಿಯಾಗಿ ನಿಂತವರು ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ. ಪರಿಶಿಷ್ಟರ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಹೆಚ್ಚಿಸಿದವರು ಬೊಮ್ಮಾಯಿ.‌ ಆದರೆ, ಇದನ್ನು ಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸದೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಸಮಾವೇಶ ಉದ್ಘಾಟಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶೋಷಿತ ಸಮುದಾಯಕ್ಕೆ ನ್ಯಾಯ ಕೊಡಲು ಧಿಟ್ಟ ನಿರ್ಧಾರ ತೆಗೆದುಕೊಂಡವರು ಪ್ರಧಾನಿ ನರೇಂದ್ರ ಮೋದಿ ಎಂದ ವಿಜಯೇಂದ್ರ, ಗ್ಯಾರಂಟಿ ಕೊಟ್ಟಿದ್ದೇವೆ ಎನ್ನುತ್ತಾ ಸರಿಯಾದ ಸಾರಿಗೆ, ಪಿಂಚಣಿ, ಬಡವರಿಗೆ ಮನೆ, ಗಂಗಾ ಕಲ್ಯಾಣ ಕೊಡಲು ಸಾಧ್ಯ ಆಗಿಲ್ಲ. ಪರಿಶಿಷ್ಟ ವರ್ಗಗಳಿಗೆ ಮೀಸಲಾದ ಎಸ್ಇಪಿ, ಟಿಎಸ್ಪಿ 55 ಸಾವಿರ ಕೋಟಿ ರು. ಅನುದಾನವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ ಎಂದು ದೂರದರು.

ಈ ಸರ್ಕಾರದಲ್ಲಿ ಗೃಹ ಸಚಿವ ಪ್ರಿಯಾಂಕ‌ ಖರ್ಗೆ ರಾಷ್ಟ್ರ, ಅಂತಾರಾಷ್ಟ್ರೀಯ ವಿಚಾರಗಳನ್ನು ಮಾತಾಡುತ್ತಾರೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತ್ಯಾಚಾರ ಪ್ರಕರಣ ವರದಿಯಾಗಿವೆ. ಈ ಬಗ್ಗೆ ಸರಿಯಾದ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಬೀದುಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಮಾಜಿ‌ ಸಚಿವರಾದ ಎ.ನಾರಾಯಣಸ್ವಾಮಿ, ಜಿ.ಎಂ.ಸಿದ್ದೇಶ್ವರ, ಸಂಸದ ಗೋವಿಂದ ಕಾರಜೋಳ, ಸಾಮರಸ್ಯದ ವಾದಿರಾಜ್, ಮಾಜಿ‌ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನ ದರಕ್ಕಿಂತ ನೀರು ದುಬಾರಿ ಕಾಲ ದೂರವಿಲ್ಲ: ಬೌದ್ಧೆ
ಎನ್‌ಡಿಆರ್‌ಎಫ್ ತಂಡದವರಿಂದ ಮುಂಜಾಗ್ರತೆ ಕುರಿತು ಪ್ರಾತ್ಯಕ್ಷಿಕೆ