ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಲು ಆಯೋಗ ಸದಾ ಸಿದ್ಧ

KannadaprabhaNewsNetwork |  
Published : Feb 08, 2026, 02:45 AM IST
ಪೋಟೊ6.7: ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳು ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಲು ಸೂಚಿಸಲಾಗಿದೆ

ಕೊಪ್ಪಳ: ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಪರಿಹರಿಸಲು ರಾಜ್ಯ ಮಹಿಳಾ ಆಯೋಗ ಸದಾ ಸಿದ್ಧವಾಗಿದ್ದು, ಮಹಿಳೆಯರ ರಕ್ಷಣೆಗೆ ಹಾಗೂ ಮಹಿಳೆಯರಿಗೆ ಕಾನೂನಾತ್ಮಕ ನೆರವು ನೀಡಲು ಬದ್ಧವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮದಲ್ಲಿ ಗಮನಿಸಿದ ಅಂಶ, ಸಮಸ್ಯೆಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಲು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳು ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಲು ಸೂಚಿಸಲಾಗಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷತೆಯ ವಾತಾವರಣ ನಿರ್ಮಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕುವಂತೆ ಅಬಕಾರಿ ಇಲಾಖೆಗೆ ಸೂಚಿಸಲಾಗಿದೆ. ನಗರದ ಸಿದ್ದೇಶ್ವರ ನಗರದಲ್ಲಿನ ಅಲೆಮಾರಿ ಜನಾಂಗ ಭೇಟಿ ಮಾಡಿದ್ದು, ಅವರಿಗೆ ನಗರಸಭೆಯಿಂದ ಅಗತ್ಯ ಸೌಕರ್ಯ ಒದಗಿಸಲಾಗಿದೆ. ಆ ಪ್ರದೇಶದಲ್ಲಿನ ವಿದ್ಯುತ್ ಕಂಬ ದುರಸ್ಥಿಗೊಳಿಸಲಾಗಿದೆ. ಆದರೆ ಅಲ್ಲಿನ ಅಂಗನವಾಡಿ ಪಕ್ಕದಲ್ಲಿಯೇ ರೈಲು ಹಳಿ ಇರುವುದರಿಂದ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಸುಮಾರು 3 ಕಿಮೀ ವ್ಯಾಪ್ತಿಯಲ್ಲಿ ಸುರಕ್ಷಾ ಫೆನ್ಸಿಂಗ್ ಅಳವಡಿಸಲು ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ಸೌಲಭ್ಯ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದರೂ ಸೌಲಭ್ಯ ಹೇಗೆ ಪಡೆಯಬೇಕು ಎಂಬ ಬಗ್ಗೆ ಸಾರ್ವಜನಿಕರಿಗೂ ಅರಿವಿರಬೇಕು. ಪ್ರತಿ ಹಳ್ಳಿಯಲ್ಲಿಯೂ ಮಹಿಳಾ ಗ್ರಾಮಸಭೆ ಕಡ್ಡಾಯವಾಗಿ ನಡೆಸಿ ಮಹಿಳೆಯರ ಸಮಸ್ಯೆ ಪರಿಹರಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಜಿಲ್ಲೆಯ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯ, ಗುಣಮಟ್ಟದ ಆಹಾರ ನೀಡುತ್ತಿರುವುದು ಪ್ರಶಂಸನೀಯ. ಕಾರಟಗಿ ತಾಲೂಕಿನ ಮೊರಾರ್ಜಿ ದೇಸಾಯಿ ವಿದಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ್ದು, ಅಲ್ಲಿ ಉತ್ತಮ ಸೌಕರ್ಯ ವಿದ್ಯಾರ್ಥಿನಿಯರಿಗೆ ಒದಗಿಸಲಾಗಿದೆ. ಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿಯೂ ಇಂತಹ ವ್ಯವಸ್ಥೆ ಒದಗಿಸಬೇಕು. ನರೇಗಾ ಕಾರ್ಯಕ್ರಮದಡಿ ಶೇ.50 ರಷ್ಟು ಜಾಬ್‌ ಕಾರ್ಡ್‌ಗಳನ್ನು ಮಹಿಳೆಯರಿಗೆ ನೀಡಬೇಕು. ಹೆಚ್ಚಿನ ಉದ್ಯೋಗ ದಿನ ಒದಗಿಸಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನ ಉಳಿಸುವುದು ನಮ್ಮೆಲ್ಲರ ಕರ್ತವ್ಯ: ಗಜು ಭಟ್ಟ ಖರ್ವಾ
ದರೋಡೆ ಪ್ರಕರಣದಲ್ಲಿ ಪೊಲೀಸ್‌ ಪೇದೆ ಭಾಗಿ