ವರ್ಗಾವಣೆ ಕೋರಿಕೆ ಪತ್ರ ಹಿಡಿದು ನೇರವಾಗಿ ಕಚೇರಿಗೆ ಬಂದ್ರೆ ಕಠಿಣ ಕ್ರಮ: ಆಯುಕ್ತ ಬಿ.ದಯಾನಂದ

KannadaprabhaNewsNetwork |  
Published : Oct 05, 2024, 01:36 AM ISTUpdated : Oct 05, 2024, 09:47 AM IST
B Dayananda

ಸಾರಾಂಶ

ವರ್ಗಾವಣೆ ಕೋರಿಕೆ ಪತ್ರ ಹಿಡಿದು ನೇರವಾಗಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಬರುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು : ವರ್ಗಾವಣೆ ಕೋರಿಕೆ ಪತ್ರ ಹಿಡಿದು ನೇರವಾಗಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಬರುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ.

ಆಡುಗೋಡಿಯ ಸಿಎಆರ್‌ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಸೇವಾ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚೆಗೆ ಬಹಳಷ್ಟು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಾವಣೆ ಕೋರಿ ಅರ್ಜಿ ಹಿಡಿದು ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಬರುತ್ತಿದ್ದಾರೆ. ವೈದ್ಯಕೀಯ ಕಾರಣ, ಕೌಟುಂಬಿಕ ಕಾರಣಗಳು ಸೇರಿ ನಾನಾ ಸಬೂಬು ಹೇಳಿಕೊಂಡು ವರ್ಗಾವಣೆಗಾಗಿ ಬರುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ.

ಪ್ರತಿ ದಿನ ವರ್ಗಾವಣೆ ಮಾಡಿಕೊಂಡು ಕೂತರೆ ಬೇರೆ ಕರ್ತವ್ಯಗಳನ್ನು ಮಾಡಲು ಸಾಧ್ಯವಿಲ್ಲ. ಮುಂಬಡ್ತಿ, ವರ್ಗಾವಣೆಗೆ ಸಮಯ ಇರುತ್ತದೆ. ಪಾರದರ್ಶಕ ಹಾಗೂ ನಿಷ್ಪಕ್ಷಪಾತ ವರ್ಗಾವಣೆಗಾಗಿ ಆನ್‌ಲೈನ್‌ ಕೌನ್ಸಿಲಿಂಗ್‌ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ. ಇನ್ನು ಮುಂದೆಯೂ ಇದೇ ಮಾದರಿ ಮುಂದುವರೆಯಲಿದೆ. ಇದನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಮನಿಸಬೇಕು ಎಂದು ಹೇಳಿದರು.

ನೇರವಾಗಿ ಬಂದರೆ ವರ್ಗಾವಣೆಗೆ ಪರಿಗಣಿಸಲ್ಲ:

ಇತ್ತೀಚೆಗಷ್ಟೇ ವರ್ಗಾವಣೆಯಾದವರೂ ಸಹ ವರ್ಗಾವಣೆ ನಾನಾ ಕಾರಣ ನೀಡಿ ವರ್ಗಾವಣೆ ರದ್ದು ಕೋರಿ ಈ ಹಿಂದೆ ಕೆಲಸ ಮಾಡುತ್ತಿದ್ದ ಠಾಣೆಗಳು ಅಥವಾ ಬೇರೆ ಠಾಣೆಗಳಿಗೆ ವರ್ಗಾವಣೆ ಕೋರಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಬರುತ್ತಿದ್ದಾರೆ. ಇದನ್ನು ಸಂಪೂರ್ಣ ನಿಲ್ಲಿಸಬೇಕು. ವರ್ಗಾವಣೆಗೆ ಕಾರಣಗಳು ಇದ್ದಲ್ಲಿ ಮೇಲಾಧಿಕಾರಿಗಳಾದ ಇನ್ಸ್‌ಪೆಕ್ಟರ್‌, ಎಸಿಪಿ, ಡಿಸಿಪಿಗಳ ಶಿಫಾರಸು ಪತ್ರದೊಂದಿಗೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬರಬೇಕು. ಒಂದು ವೇಳೆ ನೇರವಾಗಿ ಬಂದರೆ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಂದರ್ಶಕರಿಗಿಂತ ವರ್ಗಾವಣೆ ಕೋರಿ ಬರುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಂಖ್ಯೆಯೇ ಹೆಚ್ಚಿರುತ್ತದೆ. ಸಮಯ ವ್ಯರ್ಥ ಮಾಡಿಕೊಂಡು ಠಾಣೆ ಕೆಲಸ-ಕಾರ್ಯ ಬಿಟ್ಟು ಹೀಗೆ ಅಲೆದಾಡುವುದು ಸರಿಯಲ್ಲ. ಇದನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ, ನಾವು ನಿಮ್ಮನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಿಬ್ಬಂದಿಗೆ ಟಿಎ, ಡಿಎ ಕೊಡಿ:

ಕೆಲವು ಠಾಣೆಗಳಲ್ಲಿ ಸಿಬ್ಬಂದಿಗೆ ಟಿಎ, ಡಿಎ ಸಮರ್ಪಕವಾಗಿ ನೀಡದಿರುವ ಬಗ್ಗೆ ದೂರುಗಳು ಬರುತ್ತಿವೆ. ಇದು ಸರಿಯಾದ ಕ್ರಮವಲ್ಲ. ಸಂಬಂಧಪಟ್ಟ ಇನ್ಸ್‌ಪೆಕ್ಟರ್‌, ಎಸಿಪಿ, ಡಿಸಿಪಿಗಳು ಈ ಬಗ್ಗೆ ಗಮನಹರಿಸಬೇಕು. ಬಂದೋಬಸ್ತ್‌, ಸಮನ್ಸ್ ಜಾರಿ, ಅಪರಾಧ ಪತ್ತೆಗೆ ತೆರಳುವ ಸಿಬ್ಬಂದಿಗೆ ಟಿಎ, ಡಿಎ ಕಾಲಮಿತಿಯಲ್ಲಿ ನೀಡಬೇಕು ಎಂದು ಹೇಳಿದರು.

ಪ್ರಶಂಸನಾ ಪತ್ರ ವಿತರಣೆ:ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ಉತ್ತಮವಾಗಿ ಕೆಲಸ ಮಾಡಿದ ನಗರದ ವಿವಿಧ ಪೊಲೀಸ್‌ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಶಂಸನಾ ಪತ್ರ ವಿತರಿಸಿದರು. ಇತ್ತೀಚೆಗೆ ನಗರ ಪೊಲೀಸರ ಪ್ರಾಮಾಣಿಕತೆ, ಕರ್ತವ್ಯ ಪ್ರಜ್ಞೆ, ನಿಷ್ಠೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮಾದರಿಯಾಗಿ ಸ್ವೀಕರಿಸಿ ಎಲ್ಲರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು. ಅಪರಾಧ ಪತ್ತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಶ್ರಮ ಹಾಕಬೇಕು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ