ಕನ್ನಡಪ್ರಭ ವಾರ್ತೆ ಅಥಣಿ
ರಾಜ್ಯ ಸರ್ಕಾರ 2 ಸಾವಿರ ಹೊಸ ಬಸ್‌ಗಳನ್ನು ಖರೀದಿ ಮಾಡಲು ಮುಂದಾಗಿದೆ. ಅಥಣಿ ಸಾರಿಗೆ ಘಟಕಕ್ಕೆ ಹೆಚ್ಚುವರಿ ಹೊಸ ಬಸ್‌ಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಭರವಸೆ ನೀಡಿದರು.ಅಥಣಿ ಸಾರಿಗೆ ಘಟಕದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ ಅಥಣಿ-ಶ್ರವಣಬೆಳಗೊಳ ನೂತನ ಸಾರಿಗೆ ಬಸ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾದ ಮೇಲೆ ಸರ್ಕಾರಿ ಬಸ್‌ಗಳಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಪ್ರತಿದಿನ ರಾಜ್ಯಾದ್ಯಂತ ಲಕ್ಷಾಂತರ ಹೆಣ್ಣು ಮಕ್ಕಳು ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲೆಡೆ ಸಾರಿಗೆ ಬಸ್‌ಗಳು ತುಂಬಿ ತುಳುಕುತ್ತಿದ್ದು, ಇದರಿಂದ ಪುರುಷ ಪ್ರಯಾಣಿಕರಿಗೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಸೀಟ್ ಸಿಗ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದು, ಶೀಘ್ರದಲ್ಲಿಯೇ ಹೆಚ್ಚುವರಿ ಬಸ್‌ಗಳನ್ನು ಅಥಣಿ ಸಾರಿಗೆ ಘಟಕಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು. ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಥಣಿ ಸಾರಿಗೆ ಘಟಕದಿಂದ ಶ್ರವಣಬೆಳಗೊಳಕ್ಕೆ ಒಂದು ಸಾರಿಗೆ ಬಸ್‌ನ್ನು ಪ್ರತಿನಿತ್ಯ ಓಡಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇತ್ತು. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರದ ದರ್ಶನಕ್ಕಾಗಿ ಹೋಗುವ ಸದ್ಭಕ್ತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂದಿನಿಂದ ನೂತನ ಸಾರಿಗೆ ವ್ಯವಸ್ಥೆ ಆರಂಭಿಸಲಾಗಿದೆ. ಅಥಣಿ ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ಚಿಕ್ಕೋಡಿ ಸಾರಿಗೆ ವಿಭಾಗಿಯ ನಿಯಂತ್ರಣಧಿಕಾರಿ ಶಶಿಧರ್ ಮರಿದೇವರಮಠ, ವಿಭಾಗಿಯ ತಾಂತ್ರಿಕ ಅಭಿಯಂತರ ಎ.ಎಸ್.ಆಡಳಿಮಠ, ವಿಭಾಗೀಯ ಸಾರಿಗೆ ಅಧಿಕಾರಿ ಎ.ಆರ್.ಛಬ್ಬಿ, ಅಥಣಿ ಸಾರಿಗೆ ಘಟಕದ ವ್ಯವಸ್ಥಾಪಕ ಎನ್.ಎಂ.ಕೇರಿ, ನಿವೃತ್ತ ಇಂಜಿನೀಯರ್ ಅರುಣ್ ಯಲಗುದ್ರಿ, ನ್ಯಾಯವಾದಿ ಕಲ್ಲಪ್ಪ ವಣಜೋಳ, ಜೈನ ಸಮುದಾಯದ ಮುಖಂಡರಾದ ಶಾಂತಿನಾಥ ನಂದೀಶ್ವರ, ಪಾರಿಸ್ ನಂದೇಪ್ಪನವರ, ಡಿ.ಡಿ.ಮೇಕನಮರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎನ್.ಎಂ.ಕೇರಿ ಸ್ವಾಗತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಜಿ.ಕಿಚಡಿ ನಿರೂಪಿಸಿದರು. ಎಂ.ಎಸ್.ಕುಂಚನೂರು ವಂದಿಸಿದರು.
ಅಥಣಿ ಸಾರಿಗೆ ಘಟಕದಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಾರಿಗೆ ನಿಗಮದ ಅಧ್ಯಕ್ಷರಾದ ರಾಜು ಕಾಗೆ ಹಾಗೂ ನಾನು ಈ ಕ್ಷೇತ್ರದ ಶಾಸಕನಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ಸಾರಿಗೆ ಘಟಕದಲ್ಲಿ ಅಗತ್ಯವಿರುವ ಸಿಸಿ ರಸ್ತೆ ನಿರ್ಮಾಣ, ಹೈಟಿಕ್ ಶೌಚಾಲಯ ನಿರ್ಮಾಣಕ್ಕೆ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಲಾಗುವುದು.
-ಲಕ್ಷ್ಮಣ ಸವದಿ, ಶಾಸಕರು.ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಭಕ್ತ ಸಮೂಹ ಹೆಚ್ಚಾಗಿದ್ದು, ಕ್ಷೇತ್ರ ದರ್ಶನಕ್ಕೆ ನೇರವಾದ ಬಸ್ ಸಂಚಾರ ಇಲ್ಲದೇ ಹರಸಾಹಸ ಪಡಬೇಕಾಗಿತ್ತು. ಬಹುದಿನಗಳಿಂದ ಅಥಣಿಯಿಂದಲೇ ನೇರ ಬಸ್ ಸಂಚಾರಕ್ಕೆ ಬೇಡಿಕೆ ಇತ್ತು. ಈ ಬಾರಿ ಸಾರಿಗೆ ಸಂಚಾರಿ ನಿಗಮಕ್ಕೆ ನಮ್ಮ ಶಾಸಕರಾದ ರಾಜು ಕಾಗೆಯವರೇ ಅಧ್ಯಕ್ಷರಾಗಿರುವುದರಿಂದ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಥಣಿ ಜನರ ಪರವಾಗಿ ಶಾಸಕರಾದ ರಾಜು ಕಾಗೆ ಹಾಗೂ ಲಕ್ಷ್ಮಣ ಸವದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.-ಅರುಣ ಯಲಗುದ್ರಿ,
ನಿವೃತ್ತ ಇಂಜನೀಯರ್ ಅಥಣಿ.