ಕುಮಟಾ: ತದಡಿ ಮೀನುಗಾರಿಕಾ ಬಂದರಿನ ಬೋಟೊಂದರಲ್ಲಿ ಮೀನುತ್ಯಾಜ್ಯ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವನೆಯಿಂದ ಮೃತರಾದ ತಾಲೂಕಿನ ಮೂವರು ಮೀನುಗಾರ ಸಂತ್ರಸ್ತ ಕುಟುಂಬಗಳನ್ನು ಬುಧವಾರ ಭೇಟಿ ಮಾಡಿದ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿ, ತಲಾ ₹10 ಲಕ್ಷ ಪರಿಹಾರ ಚೆಕ್ ವಿತರಿಸಿದರು.
ಈ ವೇಳೆ ಸಚಿವರು ಮಾತನಾಡಿ, ಆಕಸ್ಮಿಕವಾಗಿ ನಡೆದ ಈ ದುರ್ಘಟನೆಯಲ್ಲಿ ಮೃತರ ಕುಟುಂಬದವರಿಗೆ ಸರ್ಕಾರದ ವತಿಯಿಂದ ತಲಾ ₹೧೦ ಲಕ್ಷ ಪರಿಹಾರ ವಿತರಿಸಲಾಗಿದ್ದು, ಮೃತರ ಕುಟುಂಬದವರ ಬಗ್ಗೆ ಕಾಳಜಿ ಮತ್ತು ಮೃತರ ಮಕ್ಕಳ ಶಿಕ್ಷಣದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ಬೋಟ್ ಮಾಲಿಕರ ಸಭೆ ನಡೆಸಿ, ಸೂಕ್ತ ಮುಂಜಾಗೃತಾ ಕ್ರಮ ವಹಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದೇನೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಭಟ್ಕಳ ವರೆಗಿನ ಎಲ್ಲ ಬಂದರುಗಳಲ್ಲಿ ಹೂಳು ತುಂಬಿದ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಪರಿಶೀಲಿಸಿ, ಆದ್ಯತೆಯ ಮೇರೆಗೆ ಹೂಳೆತ್ತಿಸಲು ಕ್ರಮ ವಹಿಸುವ ಭರವಸೆ ನೀಡಿದರು.ನಂತರ ಸಚಿವರು ತದಡಿ ಮೀನುಗಾರಿಕಾ ಬಂದರಿಗೆ ಭೇಟಿನೀಡಿ ಪರಿಶೀಲಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ಮೀನುಗಾರಿಕಾ ಇಲಾಖೆಯ ಕಟ್ಟಡ ತೆರವಿಗೆ ಮತ್ತು ತದಡಿ ಬಂದರಿನ ಹೂಳೆತ್ತಲು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.