ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ನಿಖಿಲ್

KannadaprabhaNewsNetwork | Published : Oct 28, 2024 1:13 AM

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣಾ ಅಖಾಡ ರಂಗೇರಿದ್ದು, ಭಾನುವಾರ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಾಲೂಕಿನ ಮಾಕಳಿ ಗ್ರಾಮಕ್ಕೆ ಆಗಮಿಸಿ, ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.

ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣಾ ಅಖಾಡ ರಂಗೇರಿದ್ದು, ಭಾನುವಾರ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ

ತಾಲೂಕಿನ ಮಾಕಳಿ ಗ್ರಾಮಕ್ಕೆ ಆಗಮಿಸಿ, ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ನಿಖಿಲ್ ಪ್ರಚಾರಕ್ಕೆ ಅರಕಲಗೂಡು ಶಾಸಕ ಎ.ಮಂಜು, ಮಾಜಿ ಶಾಸಕರಾದ ಸುರೇಶ್ ಗೌಡ, ಎ.ಮಂಜುನಾಥ್‌ ಸಾಥ್ ನೀಡಿದರು. ನಿಖಿಲ್‌ ಕುಮಾರಸ್ವಾಮಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.

ಈ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಾನು ಚನ್ನಪಟ್ಟಣ ಉಪಚುನಾವಣೆಯ ಆಕಾಂಕ್ಷಿಯಾಗಿರಲಿಲ್ಲ. ಆದರೆ, ಕಾರ್ಯಕರ್ತರ ಒತ್ತಾಯಕ್ಕೆ ಕಟ್ಟುಬಿದ್ದು ಸ್ಪರ್ಧಿಸಿದ್ದೇನೆ. ನಿಮ್ಮ ಸೇವೆ ಮಾಡಲು ನನಗೂ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಮಂಡ್ಯದಲ್ಲಿ ಕುಮಾರಣ್ಣ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಮೇಲೆ ತೆರವಾದ ಕ್ಷೇತ್ರದಿಂದ ಈಗ ಕಾಂಗ್ರೆಸ್ ಸೇರಿರುವ ಅಭ್ಯರ್ಥಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದರು. ಆಗ ಕುಮಾರಣ್ಣ ಮೊದಲು ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ರಾಷ್ಟ್ರೀಯ ನಾಯಕರ ಜತೆ ಹೋಗಿ ಮಾತಾಡೋಣ ಅಂದಿದ್ದರು. ಅದಾದ ನಂತರ ನಡೆದ ಬೆಳವಣಿಗೆಗಳನ್ನು ನೀವೆ ಗಮನಿಸುತ್ತಿದ್ದೀರಿ ಎಂದು ಹೇಳಿದರು.

ಬೆಂಗಳೂರು ಖಾಸಗಿ ಹೋಟೆಲ್‌ನಲ್ಲಿ ಅವರ ಜತೆ ಚರ್ಚೆ ಮಾಡಿದ್ವಿ. ಜೆಡಿಎಸ್ ಸಾಂಪ್ರದಾಯಿಕ ಮತಗಳಿದೆ, ಜೆಡಿಎಸ್‌ನಿಂದ ನಿಂತ್ಕೊಳ್ಳಿ ಅಂತ ನಮ್ಮ ನಾಯಕರು ಹೇಳಿದರು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದರೂ ನಮ್ಮ ನಾಯಕರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಅಂತ ಕೇಳಿದ್ರು. ಆದಾದ ಮೇಲೆ ಏನೆಲ್ಲ ಮಾತಾಡಿದ್ರು ನಿಮಗೆ ಗೊತ್ತಿರುವ ವಿಚಾರ. ಅವರು ತರಾತರಿಯಲ್ಲಿ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡರು. ಬಿಜೆಪಿ ಅಷ್ಟೆಲ್ಲ ಸ್ಥಾನ ಕೊಟ್ಟಿದ್ರು ಬಿಟ್ಟು ಹೋದ್ರು. ಅವರು ಯಾವ ಪಕ್ಷದಲ್ಲೂ ಉಳಿದುಕೊಳ್ಳಲ್ಲ. ಏನೇ ನೋವಿದ್ರು ಸಹಿಸ್ಕೊಂಡು ಅವರಿಗೆ ಅವಕಾಶ ನೀಡಿದೆವು. ಆದರೂ ಅವರು ಹೋದರು ಎಂದು ಬೇಸರ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತು ಬಹಳ ಬೇಸರ ತರಿಸಿದೆ. ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದುಕೊಂಡಿರಲಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಸಂಘಟನೆ ಮಾಡ್ತಿದ್ದೆ. ಈಗ ಒಬ್ಬ ವ್ಯಕ್ತಿ ತೆಗೆದುಕೊಂಡ ತೀರ್ಮಾನದಿಂದ ಇಲ್ಲಿ ಸ್ಪರ್ಧಿಸುವಂತಾಯಿತು. ಇಡಿ ಸಚಿವ ಸಂಪುಟ ಇಲ್ಲಿ ಬೀಡು ಬಿಟ್ಟಿದ್ದರಿಂದ ಕಾರ್ಯಕರ್ತರು ಒತ್ತಾಯ ಮಾಡಿದರು ಎಂದು ತಿಳಿಸಿದರು.

ಪಡ್ಯಂತ್ರ ನಡೆಸಿದರು:

ರಾಮನಗರ, ಮಂಡ್ಯ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ರಾಮನಗರದಲ್ಲಿ ಕೂಪನ್ ಕಾರ್ಡ್ ಕೊಟ್ಟು ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಿದರು. ಅದಕ್ಕೆ ಉತ್ತರ ಕೊಡಬೇಕಲ್ವಾ. ನಾವು ಕುತಂತ್ರ ಮಾಡಿ ರಾಜಕಾರಣ ಮಾಡಿದವರಲ್ಲ. ಕುಮಾರಣ್ಣನ ನಾಯಕತ್ವಕ್ಕೆ ಇದು ಅಗ್ನಿ ಪರೀಕ್ಷೆ. ಇಲ್ಲಿ ನಿಖಿಲ್ ಪ್ರಶ್ನೆ ಅಲ್ಲ. ಎಲ್ಲವೂ ನಿಮ್ಮ ಕೈಯಲ್ಲಿದೆ, ಕೈ ಜೋಡಿಸಿ ಬೇಡಿಕೊಳ್ತಿದ್ದೇನೆ. ಒಂದು ಅವಕಾಶ ಕೊಡಿ. ದೇವೇಗೌಡರು, ಕುಮಾರಸ್ವಾಮಿ ನಿಮಗಾಗಿ ಕೆಲಸ ಮಾಡಿದ್ದಾರೆ. ನನ್ನ ಕೊನೆ ಉಸಿರಿರೊವರೆಗೂ ನಿಮ್ಮ ಜೊತೆ ಇರ್ತೇನೆ. ಒಂದೇ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಜನ ಎರಡು ಬಾರಿ ಆಯ್ಕೆ ಮಾಡಿದ್ದೀರಿ. ಕುಮಾರಣ್ಣ ಅವ್ರು ಬಡವರ, ದಲಿತರ, ಯುವಕರ ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಕುಮಾರಣ್ಣರನ್ನು ಮುಖ್ಯಮಂತ್ರಿ ಮಾಡಿದ ಕೀರ್ತಿ ಚನ್ನಪಟ್ಟಣ ಜನತೆಗೆ ಸೇರಬೇಕು. ನನಗೂ ಒಮ್ಮೆ ಅವಕಾಶ ಕೊಡಿ ಎಂದರು.

ಈ ಜಿಲ್ಲೆಯಲ್ಲಿ ನಾವು ಹುಟ್ಟದೇ ಇರಬಹುದು. ಆದರೆ, ಜಿಲ್ಲೆಯ ಜತೆಗೆ ಹಲವಾರು ವರ್ಷದ ನಂಟಿದೆ. ದೇವೇಗೌಡರು ಇಗ್ಗಲೂರು ಬ್ಯಾರೇಜ್ ಕಟ್ಟದೆ ಹೋಗಿದ್ದರೆ ಎಲ್ಲಿಂದ ಕೆರೆಗೆ ನೀರು ತುಂಬಿಸುತ್ತಿದ್ದರು. ಗೋಲಿಬಾರ್ ಆಗಿ ಇಬ್ಬರು ತೀರಿಕೊಂಡ್ರು. ನಾನು ಆಗ ಚಿಕ್ಕ ಹುಡುಗ, ದೇವೇಗೌಡರು ನನಗೆ ಪಾಠ ಮಾಡಿದ್ದಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಕಣ್ಣಲ್ಲಿ ನೀರಾಕ್ತಾರೆ ಮರಳಾಗಬೇಡಿ ಅಂತಾರೆ. ಅವರು ಕಣ್ಣೀರಾಕೋದು ನನಗಾಗಿ ಅಲ್ಲ. ರೈತರ ಪರವಾಗಿ, ನಾಡಿದ ಜನರು ನೋವಿನಲ್ಲಿದ್ದಾಗ ಕಣ್ಣಲ್ಲಿ ನೀರಾಕಿದ್ದಾರೆ. ಅದನ್ನ ಹೊರತುಪಡಿಸಿ ಅವರು ನನಗಾಗಿ ಕಣ್ಣೀರು ಹಾಕಲಿಲ್ಲ. ನನಗೆ ಆತ್ಮವಿಶ್ವಾಸ ತುಂಬಿ ದೇವೇಗೌಡರು ಕಳುಹಿಸಿದ್ದಾರೆ. ನಿಮ್ಮ ಸಹಕಾರ ಇರಲಿ ಎಂದರು.

ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ತಾಲೂಕಿನ ಮಾಕಳಿ, ದಶವಾರ ಹಾಗೂ ನಾಗವಾರ ಗ್ರಾಪಂ ವ್ಯಾಪ್ತಿಯ ಸುಮಾರು ೧೫ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್‌..............

ನನ್ನ ಸ್ಪರ್ಧೆ ಅನಿರೀಕ್ಷಿತ: ನಿಖಿಲ್

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ನನ್ನ ಸ್ಪರ್ಧೆ ಅನಿರೀಕ್ಷಿತ, ಕ್ಷೇತ್ರದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡಿದ್ದೇನೆ. ಇಂದು ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಜೊತೆ ಪ್ರಚಾರ ಮಾಡುತ್ತಿದ್ದೇನೆ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಅವರು ದೊಡ್ಡ ಮಟ್ಟದ ಅನುದಾನ ತಂದಿದ್ದರು. ದೇವೇಗೌಡರು ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದಾರೆ. ತಾಲೂಕಿನ ನೀರಾವರಿ ಯೋಜನೆಗೆ ಅವರ ಕೊಡುಗೆ ಶಾಶ್ವತವಾಗಿದೆ. ನೀರಾ ಚಳವಳಿ ವೇಳೆ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರುವರೆಗೂ ಪಾದಯಾತ್ರೆ ಮಾಡಿದ್ದರು. ಇದು ನೆರವಾಗಲಿದೆ ಎಂದು ತಿಳಿಸಿದರು.

ನಾನು ಈ ಉಪಚುನಾವಣೆಗೆ ನಿಲ್ಲಲೇಬೇಕು ಎಂದು ಬಯಸಿರಲಿಲ್ಲ. ಕಾರ್ಯಕರ್ತರ ಒತ್ತಡದಿಂದ ಸ್ಪರ್ಧೆ ಮಾಡ್ತಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಬದಲಾವಣೆ ಚುನಾವಣೆ ಎದುರಿಸ್ತಿದ್ದೇನೆ. ಕಳೆದ ಎರಡು ಚುನಾವಣೆಯಲ್ಲಿ ಸೋತಿದ್ದೇನೆ. ಒಬ್ಬ ಯುವಕನಾಗಿ, ಯುವಕರ ಧ್ವನಿಯಾಗಿ ಕೆಲಸ ಮಾಡ್ತೇನೆ. ಅದಕ್ಕೆ ಕ್ಷೇತ್ರದ ಜನ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪೊಟೋ೨೭ಸಿಪಿಟಿ೨,೩:

ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಪ್ರಚಾರ ನಡೆಸಿದರು.

Share this article