ಧಾರವಾಡ:
ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳು ಪದವಿ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಉದ್ದೇಶದಿಂದ ಬೆಂಗಳೂರು, ಧಾರವಾಡ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಶುರು ಮಾಡಿದ್ದ ಯೋಜನೆಯಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದೆ ಎಂದು ದಲಿತ ಮುಖಂಡ ಎಂ. ಅರವಿಂದ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಜಿಲ್ಲೆಗಳಲ್ಲಿ ಖಾಸಗಿ ಕಾಲೇಜುಗಳಲ್ಲಿ ಪದವಿ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಸಹ ಪಡೆಯಲು ಈ ಯೋಜನೆಯಡಿ ಅವಕಾಶವಿದ್ದು, ಪ್ರತಿ ವರ್ಷ ₹ 112 ಕೋಟಿ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಆದರೆ, ಧಾರವಾಡದ ಕ್ಲಾಸಿಕ್ ಸಂಸ್ಥೆ ಸೇರಿ ಉಳಿದೆಡೆಯೂ ಯಾವ ಸಂಸ್ಥೆಗಳು ಈ ವರೆಗೂ ಒಬ್ಬ ವಿದ್ಯಾರ್ಥಿಯನ್ನು ಐಎಎಸ್, ಕೆಎಎಸ್, ಐಪಿಎಸ್ ಹೋಗಲಿ ಪಿಎಸೈ ಮಟ್ಟಕ್ಕೂ ಸಿದ್ಧಗೊಳಿಸಿಲ್ಲ. ಹಾಗಿದ್ದರೆ, ಕೋಟಿಗಟ್ಟಲೇ ಹಣ ವ್ಯಯಿಸಿದ್ದು ಏತಕ್ಕೆ? ಎಂದು ಅರವಿಂದ ಪ್ರಶ್ನಿಸಿದರು.
ಧಾರವಾಡದ ವಿವಿಧ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಕಳಪೆ ಮಟ್ಟದಲ್ಲಿ ನಮಗೆ ತರಬೇತಿ ನೀಡುತ್ತಿದ್ದಾರೆ. ನಮ್ಮನ್ನು ಕೈ ಬಿಟ್ಟುಬಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಬರೀ ತರಬೇತಿ ಮಾತ್ರವಲ್ಲ ಊಟ, ವಸತಿಯೂ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಎಸ್ಸಿ-ಎಸ್ಟಿ ಹಾಗೂ ಹಿಂದುಗಳ ವಿದ್ಯಾರ್ಥಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳು ಕೋಟಿಗಟ್ಟಲೇ ಲೂಟಿ ಹೊಡೆಯುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಇಂತಹ ಒಂದು ಅಪ್ರಯೋಜಕ ಯೋಜನೆ ಜಾರಿಗೆ ತಂದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸಾವಿರಾರು ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಸರ್ಕಾರದಿಂದ ನೇಮಕಾತಿಯಾಗಿಲ್ಲ ಎನ್ನುವುದು ಸತ್ಯ. ಆದರೆ, ಇಷ್ಟೊಂದು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿದ್ದು, ಗಲಾಟೆ, ಅನಾಹುತ ಆಗಿದ್ದರೆ ಯಾರು ಜವಾಬ್ದಾರಿ? ಇದಕ್ಕೆ ಕಾರಣವಾದ ಸಂಘಟನೆ, ಖಾಸಗಿ ತರಬೇತಿ ಸಂಸ್ಥೆಗಳು ಹಾಗೂ ಪ್ರಚೋದನೆ ನೀಡಿದ ಶಾಸಕ ಅರವಿಂದ ಬೆಲ್ಲದ ವಿರುದ್ಧವೂ ಕ್ರಮವಾಗಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಬಕ್ಕಾಯಿ, ಶಂಕರ ಮುಗಳಿ, ವಿಶ್ವನಾಥ ಪಟಾತ್ ಇದ್ದರು.