ಕಾಂಗ್ರೆಸ್‌ ವಿರುದ್ಧವೇ ಸ್ಪರ್ಧೆ ನೋವು ತಂದಿದೆ: ಸ್ವತಂತ್ರ ಅಭ್ಯರ್ಥಿ ಎಸ್.ಪಿ. ದಿನೇಶ್

KannadaprabhaNewsNetwork | Published : May 27, 2024 1:01 AM

ಸಾರಾಂಶ

2012ರಲ್ಲಿ ಪ್ರಥಮ ಬಾರಿಗೆ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಸ್ಪರ್ಧಿಸಿ ಕೇವಲ 900 ಮತಗಳ ಅಂತರದಿಂದ ಪರಾಭವಗೊಂಡಿದ್ದು ಮತ್ತೆ 2018ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಸೂಚನೆ ಮೇರೆಗೆ ವರ್ಷಕ್ಕೂ ಮೊದಲೇ ಕ್ಷೇತ್ರದ ಮತದಾರರ ಸಂಪರ್ಕಿಸಿ ಸಂಘಟಿಸಿದ್ದು ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಎಲ್ಲ ರೀತಿಯ ಆಮಿಷ ಮೂಲಕ ಬಿಜೆಪಿ ಗೆಲುವು ಸಾಧಿಸಿತ್ತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಎನ್ಎಸ್‌ಯುಐಯಿಂದ ಪಾದಾರ್ಪಣೆಯಾಗಿ ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನೆಯಲ್ಲಿ ಕಳೆದ 43 ವರ್ಷದಿಂದ ಸಕ್ರಿಯವಾಗಿದ್ದು, ಈಗ ಪಕ್ಷದ ವಿರುದ್ಧ ಸ್ಪರ್ಧಿಸಬೇಕಾದ ಅನಿವಾರ್ಯ ಸ್ಥಿತಿ ನೋವು ತಂದಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದಲ್ಲಿ ಎಲ್ಲ ನೋವು ಸಹಿಸಿಕೊಳ್ಳುತ್ತಿದ್ದೆ, ಆದರೆ ಹಣಬಲ,ಸ್ವಾರ್ಥ ರಾಜಕಾರಣಕ್ಕೆ ಬಿಜೆಪಿಯಿಂದ ವಲಸೆ ಬಂದವರಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಪದವೀಧರ ಕ್ಷೇತ್ರಕ್ಕೆ ಸ್ಪರ್ದಿಸಿದ್ದಾಗಿ ಸ್ವತಂತ್ರ ಅಭ್ಯರ್ಥಿ ಎಸ್.ಪಿ ದಿನೇಶ್ ತಿಳಿಸಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2012ರಲ್ಲಿ ಪ್ರಥಮ ಬಾರಿಗೆ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಸ್ಪರ್ಧಿಸಿ ಕೇವಲ 900 ಮತಗಳ ಅಂತರದಿಂದ ಪರಾಭವಗೊಂಡಿದ್ದು ಮತ್ತೆ 2018ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಸೂಚನೆ ಮೇರೆಗೆ ವರ್ಷಕ್ಕೂ ಮೊದಲೇ ಕ್ಷೇತ್ರದ ಮತದಾರರ ಸಂಪರ್ಕಿಸಿ ಸಂಘಟಿಸಿದ್ದು ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಎಲ್ಲ ರೀತಿಯ ಆಮಿಷ ಮೂಲಕ ಬಿಜೆಪಿ ಗೆಲುವು ಸಾಧಿಸಿತ್ತು. ರಾಜ್ಯದಲ್ಲಿ ಪದವೀಧರ ಕ್ಷೇತ್ರ ಎಲ್ಲ ಚುನಾವಣೆ ರೀತಿಯಲ್ಲಿ ಕಲುಷಿತಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಲು ಆಸಕ್ತಿ ವಹಿಸಿ ಕಳೆದ ಬಾರಿಯ ಸೋಲು ಗೆಲುವಾಗಿಸಲು ಮತದಾರರ ಜತೆ ನೇರ ಸಂಪರ್ಕ ಹೊಂದಿ ಎಲ್ಲ ಸಿದ್ಧತೆ ಕೈಗೊಂಡಿದ್ದೆ. ಈ ದಿಸೆಯಲ್ಲಿ ಪಕ್ಷದ 5 ಜಿಲ್ಲಾಧ್ಯಕ್ಷರು,12 ಶಾಸಕರು ಶಿಫಾರಸ್ಸು ಪತ್ರ ನೀಡಿದರೂ ಕಾಣದ ಕೈಗಳು ಕೊನೆ ಘಳಿಗೆಯಲ್ಲಿ ಎಐಸಿಸಿ ಮೂಲಕ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ಬಾರದಂತೆ ಅಭ್ಯರ್ಥಿ ಘೋಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮಾಡಿದ ಮನವಿ ಫಲ ನೀಡದ ಕಾರಣ ಪಕ್ಷೇತರನಾಗಿ ಸ್ಪರ್ಧಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು ಎಂದರು. ಗೋಷ್ಠಿಯಲ್ಲಿ ಪ್ರೊ.ನಾರಾಯಣರಾವ್, ಪ್ರೊ.ವೆಂಕಟಾಚಲಪತಿ, ಮಾರುತಿ, ಅಮಿತ್, ಈಶ್ವರ್, ಧರ್ಮಾನಾಯ್ಕ ಮತ್ತಿತರರಿದ್ದರು.

ಏಕಾಏಕಿ ಅಭ್ಯರ್ಥಿಯಾದವರ ಒಪ್ಪಲಾಗಲ್ಲ

ನಾನು ಎಂದಿಗೂ ಕಾಂಗ್ರೆಸ್ಸಿಗ ಪಕ್ಷದ ವಿರುದ್ಧ ಸ್ಪರ್ಧಿಸುತ್ತಿಲ್ಲ, ಅಭ್ಯರ್ಥಿಯ ವಿರುದ್ಧ ಮಾತ್ರವೇ ನನ್ನ ಸ್ಪರ್ಧೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದವರಿಗೆ ಟಿಕೆಟ್ ನೀಡಿದಲ್ಲಿ ಎಲ್ಲ ನೋವು ಸಹಿಸಿಕೊಳ್ಳುತ್ತಿದ್ದೆ ಆದರೆ ಬಿಜೆಪಿಯಲ್ಲಿದ್ದು ಇದೀಗ ಏಕಾಏಕಿ ಅಭ್ಯರ್ಥಿಯಾದವರ ಸಹಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಹಣ ಬಲ, ಸ್ವಾರ್ಥ ರಾಜಕಾರಣ ಕಾಂಗ್ರೆಸ್ ಹಾಗೂ ಬಿಜೆಪಿ ಸಹಿತ ಎಲ್ಲ ಪಕ್ಷದಲ್ಲಿ ವ್ಯಾಪಕವಾಗಿದೆ. ಈಗಾಗಲೇ 85 ಸಾವಿರ ಮತದಾರರಿಗೆ ಬರೆದ ಪತ್ರಕ್ಕೆ ಹಲವರು ಉತ್ತರಿಸಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವ ಭರವಸೆ ನೀಡಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದು ಗೆಲವು ನಿಶ್ಚಿತ ಎಂದು ಎಸ್.ಪಿ ದಿನೇಶ್ ವಿಶ್ವಾಸ ವ್ಯಕ್ತಪಡಿಸಿದರು.

Share this article