ಕೊಟ್ಟೂರು: ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ಹೆಚ್ಚಾಗಿದೆ. ಇದೀಗ ತೋರಿಕೆಗಾಗಿ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯುತ್ತಿದೆ ಅಷ್ಟೇ. ಇದರ ಹೊರತಾಗಿ ಯಾವುದೇ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಉಜ್ಜಯನಿ ಸದ್ಧರ್ಮ ಪೀಠದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಕುರ್ಚಿ ಕಾದಾಟದ ತೀವ್ರತೆ ಹೆಚ್ಚಾಗಿರುವುದನ್ನು ಮನಗಂಡಿದ್ದಾರೆ. ಆದರೆ ಸಾರ್ವಜನಿಕವಾಗಿ ಪಕ್ಷದೊಳಗಿನ ಗೊಂದಲ ಬಯಲು ಮಾಡಬಾರದು ಎನ್ನುವ ಕಾರಣಕ್ಕಾಗಿ ಕೇವಲ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.ರಾಜ್ಯದಲ್ಲಿ ಮೆಕ್ಕೆಜೋಳ, ಭತ್ತ, ಕಬ್ಬು, ಬೆಳೆಗಾರರ ಸಮಸ್ಯೆ ಉಲ್ಬಣವಾಗಿದೆ. ಅವುಗಳ ಖರೀದಿ ಕೇಂದ್ರ ಪ್ರಾರಂಭ ಮಾಡುವ ಗೋಜಿಗೆ ಹೋಗದೇ ರೈತರನ್ನು ವಂಚಿಸುವ ಪ್ರಯತ್ನ ಮಾಡಿದ್ದಾರೆ. ವಿಧಾನಸಭೆ ಅಧಿವೇಶನ ಸೋಮವಾರದಿಂದ ನಡೆಯುವ ಕಾರಣಕ್ಕಾಗಿ ಖರೀದಿ ಕೇಂದ್ರದ ಆದೇಶದ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ನಾಡಿನ ರೈತರಿಗೆ ಪ್ರತಿ ಹಂತದಲ್ಲೂ ಸರ್ಕಾರ ದ್ರೋಹ ಮಾಡುತ್ತಿದೆ ಎಂದರು.
ಮಾಜಿ ಸಚಿವ ಕೆ.ಎನ್. ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ, ಬಿಜೆಪಿ ನಾಯಕರ ಜತೆ ಇತ್ತೀಚೆಗೆ ದೆಹಲಿಯಲ್ಲಿ ಮಾತನಾಡಿದ ವಿಚಾರ ತಮಗೆ ಗೊತ್ತಿಲ್ಲ ಎಂದು ಅವರು ಹೇಳಿದರು.ಬಿಜೆಪಿಯ ಭಿನ್ನ ಬಣದವರೆಂದು ಹೇಳಿಕೊಂಡ ಕೆಲವರು, ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಯಾರಾದರೂ ಯಾರನ್ನಾದರೂ ಭೇಟಿ ಮಾಡಬಹುದು. ಆದರೆ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ, ಅದು ಇದ್ದರೆ, ಬಿಜೆಪಿ ಬಣ ಮಾತ್ರ ಎಂದು ಅವರು ಹೇಳಿದರು.