ನರೇಗಲ್ಲ: ಪ್ರತಿಯೊಬ್ಬ ಕ್ರೀಡಾಪಟುವಿನಲ್ಲೂ ಕ್ರೀಡಾ ಮನೋಭಾವ ಮುಖ್ಯ ಎಂದು ಯವ ಮುಖಂಡ ಮಿಥುನ ಪಾಟೀಲ ಹೇಳಿದರು.
ಅವರು ಕರ್ನಾಟಕ ಅಟ್ಯಾಪಟ್ಯಾ ಅಸೋಸಿಯೇಷನ್ ಹಾಗೂ ಸ್ಥಳೀಯ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಚೈತನ್ಯ ಕ್ರೀಡಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 32ನೇ ರಾಜ್ಯಮಟ್ಟದ ಅಟ್ಯಾಪಟ್ಯಾ ಚಾಂಪಿಯನ್‌ಶಿಪ್ 2024ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸೋಲು-ಗೆಲುವು ನಿಮ್ಮ ಸತತ ಪ್ರಯತ್ನದ ಫಲವಾಗಿರುತ್ತದೆ. ನೀವು ಸ್ಪರ್ಧಿಸುವ ಪ್ರತಿ ಪಂದ್ಯದಲ್ಲೂ ಪ್ರತಿಭೆ ಹೆಚ್ಚು ಹೊರಹೊಮ್ಮಿದಲ್ಲಿ ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ. ಶ್ರಮದ ಪ್ರತಿಫಲವೇ ಸಾಧನೆಯಾಗಿದೆ ಎಂದು ಹೇಳಿದರು.ರಾಜ್ಯ ಅಟ್ಯಾಪಟ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್.ಸಿ. ಲಮಾಣಿ ಮಾತನಾಡಿ, ನರೇಗಲ್ಲಿನ ಚೈತನ್ಯ ಕ್ರೀಡಾ ಸಂಸ್ಥೆಯವರು ರಾಜ್ಯಮಟ್ಟದ ಅಟ್ಯಾಪಟ್ಯಾ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ ಎಂದರು. ಮುಖಂಡರಾದ ರವಿ ದಂಡಿನ, ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಪಿಎಸ್ಐ ಐಶ್ವರ್ಯಾ ನಾಗರಾಳ, ಮುತ್ತಪ್ಪ ಮೂಲ್ಕಿ, ಸಂತೋಷ ಹನುಮಸಾಗರ, ಸದ್ದಾಂ ನಶೇಖಾನ, ಶೇಖಪ್ಪ ಕೆಮಗಾರ, ಶೇಖಪ್ಪ ಜುಟ್ಲ ವಿಜೇತ ತಂಡಗಳಿಗೆ ಪಾರಿತೋಷಕ ವಿತರಣೆ ಮಾಡಿದರು.
ಸ್ಥಳೀಯ ಚೈತನ್ಯ ಕ್ರೀಡಾ ಸಂಸ್ಥೆಯ ಸೀನಿಯರ್ ಬಾಲಕಿಯರ ತಂಡ, ಜೂನಿಯರ್ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದರೆ ಸಬ್ ಜ್ಯೂನಿಯರ್ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆಯಿತು.ವೈ.ಸಿ. ಪಾಟೀಲ, ಖಜಾನೆ ಇಲಾಖೆಯ ಸಹನಿರ್ದೇಶಕ ಎಸ್.ಎಚ್. ಬಾದನಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಪೋತರಾಜ ಮಣ್ಣೊಡ್ಡರ, ಅಲ್ಲಾಭಕ್ಷಿ ನದಾಫ, ಕಳಕನಗೌಡ ಪೊಲೀಸ್‌ಪಾಟೀಲ್, ಡಾ. ವಿ.ಸಿ. ಇಲ್ಲೂರ, ಶಿವಪುತ್ರಪ್ಪ ಕಡೆತೋಟದ, ಗದಗ ಜಿಲ್ಲಾ ಅಟ್ಯಾಪಟ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಟಿ. ನಡುಮನಿ, ಚೈತನ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ನಿಂಗರಾಜ ಬೇವಿನಕಟ್ಟಿ, ಶಿಕ್ಷಕ ವಿ.ಎ. ಕುಂಬಾರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್.ಎಸ್. ನರೇಗಲ್ಲ, ಚೈತನ್ಯ ಕ್ರೀಡಾಸಂಸ್ಥೆಯ ಮುಖ್ಯ ತರಬೇತುದಾರ ಮಹಮ್ಮದ ರಫೀಕ್ ರೇವಡಿಗಾರ, ಸಂಸ್ಥೆಯ ಕಾರ್ಯದರ್ಶಿ ಸಂತೋಷ ಯಳಮಲಿ ಭಾಗವಹಿಸಿದ್ದರು.