ಹಳಿಯಾಳದ ಹಾಸ್ಟೆಲ್ ವಾರ್ಡನ್‌ ವಿರುದ್ಧ ದೂರು: ಅಧಿಕಾರಿಗಳ ತಂಡ ಭೇಟಿ

KannadaprabhaNewsNetwork | Published : Jan 1, 2025 12:00 AM

ಸಾರಾಂಶ

ಆರೋಪಿ ವಾರ್ಡನ್ ಅವರನ್ನು ತಾತ್ಕಾಲಿಕವಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ನಿಯೋಜನೆ ಮಾಡಲು ಕ್ರಮ ಕೈಗೊಂಡಿರುವುದಾಗಿ ತನಿಖೆಗೆ ಬಂದಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಹಳಿಯಾಳ: ಪಟ್ಟಣದ ಪರಿಶಿಷ್ಟ ಪಂಗಡಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯದ ವಾರ್ಡನ್ ವಿರುದ್ಧ ಕೆಲವು ಸಂಘಟನೆಗಳು ನೀಡಿದ ದೂರು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಆದೇಶದ ಹಿನ್ನೆಲೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ ವೈ.ಕೆ. ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಮಂಗಳವಾರ ವಸತಿನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಆರೋಪಿ ವಾರ್ಡನ್ ಅವರನ್ನು ತಾತ್ಕಾಲಿಕವಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ನಿಯೋಜನೆ ಮಾಡಲು ಕ್ರಮ ಕೈಗೊಂಡಿರುವುದಾಗಿ ತನಿಖೆಗೆ ಬಂದಿದ್ದ ಅಧಿಕಾರಿಗಳು ತಿಳಿಸಿದ್ದಾರೆ.ಅಧಿಕಾರಿಗಳ ಭೇಟಿಯ ಹಿನ್ನೆಲೆ ವಾರ್ಡನ್ ಸೇವೆಯ ಬಗ್ಗೆ ಅಭಿಪ್ರಾಯ ತಿಳಿಸಲು ವಿದ್ಯಾರ್ಥಿಗಳ ಪಾಲಕರು ಆಗಮಿಸಿದ್ದರು. ವಾರ್ಡನ್ ವರ್ಗಾವಣೆಗೆ ಆಗ್ರಹಿಸಿ ಮನವಿ ಸಲ್ಲಿಸಿದ ದಲಿತ ಸಂಘಟನೆಗಳ ಪ್ರಮುಖರು ಹಾಗೂ ವಾರ್ಡನ್ ಪರವಾಗಿ ಹಳಿಯಾಳ ಘಟಕದ ಮಾಜಿ ಸೈನಿಕರ ಸಮನ್ವಯ ಸಮಿತಿಯ ನಿಯೋಗವು ಆಗಮಿಸಿತ್ತು.ಸಿಎಂಗೆ ದೇಶಪಾಂಡೆ ಪತ್ರ: ವಾರ್ಡನ್ ಕರ್ತವ್ಯದ ಬಗ್ಗೆ ಅಸಮಾಧಾನಗೊಂಡ ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಪಾರದರ್ಶಕವಾಗಿ ತನಿಖೆ ಕೈಗೊಳ್ಳುವಂತೆ, ಕೂಡಲೇ ಬೇರೆಡೆ ವರ್ಗಾವಣೆಗೆ ಮನವಿ ಮಾಡಿದ್ದಾರೆ. ವಿಚಾರಣೆ: ವಾರ್ಡನ್ ವಿರುದ್ಧ ಲೈಂಗಿಕ ಆರೋಪಗಳ ದೂರನ್ನು ಸಲ್ಲಿಸಿದ ವಸತಿನಿಲಯದ ಅಡುಗೆ ಸಿಬ್ಬಂದಿಯ ವಿಚಾರಣೆ ನಡೆಸಿದ ಶಿರಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಇಮ್ಮಡಿ ಹಾಗೂ ಅಧಿಕಾರಿಗಳು ಸೂಕ್ತ ಮಾಹಿತಿ ಕಲೆಹಾಕಿ ಸಿಬ್ಬಂದಿಯ ಹೇಳಿಕೆ ಪಡೆದರು. ಕೆಲವು ಪಾಲಕರು ವಾರ್ಡನ್ ಬಗ್ಗೆ ಹಾಗೂ ವಸತಿನಿಲಯದಲ್ಲಿನ ವ್ಯವಸ್ಥೆಗಳ ಬಗ್ಗೆ ಹೇಳಿಕೆ ನೀಡಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ಇತರರು ಇದ್ದರು. ಮಾಜಿ ಸೈನಿಕರಿಂದ ಮನವಿ: ಮಾಜಿ ಸೈನಿಕರ ಸಮನ್ವಯ ಸಮಿತಿಯ ನಿಯೋಗವು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ ವೈ.ಕೆ. ಅವರನ್ನು ಭೇಟಿಯಾಗಿ ಮನವಿಯನ್ನು ನೀಡಿ, ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ, ಪ್ರಸ್ತುತ ವಸತಿನಿಲಯದ ವಾರ್ಡನ್ ವಿಜಯಕುಮಾರ ಪಾಟೀಲ ಅವರ ಕುಟುಂಬದವರ ಮೇಲೆ ದೌರ್ಜನ್ಯ ಹಾಗೂ ತೇಜೋವಧೆ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹೇಳಿಕೆ ಸಂಗ್ರಹ: ಮಂಗಳವಾರ ವಸತಿನಿಲಯಕ್ಕೆ ಭೇಟಿ ನೀಡಿ ಸಂಬಂಧಿತ ಪ್ರಕರಣದ ತನಿಖೆಯನ್ನು ನಡೆಸಿ, ದೂರುದಾರರ ಹೇಳಿಕೆ ಸಂಗ್ರಹಿಸಿ ವರದಿಯನ್ನು ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಲ್ಲಿಸುತ್ತೇವೆ. ವಾರ್ಡನ್ ವಿಜಯಕುಮಾರ ಪಾಟೀಲ ಅವರನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಉಮೇಶ ವೈ.ಕೆ. ತಿಳಿಸಿದರು.

Share this article