ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶಾಸಕರಿಗೆ ಸಾರ್ವಜನಿಕರಿಂದ ದೂರು

KannadaprabhaNewsNetwork |  
Published : Dec 04, 2024, 12:31 AM IST
3ಕೆಆರ್ ಎಂಎನ್ 1.ಜೆಪಿಜಿಒಂಟಿ ಸಲಗ ದಾಳಿಗೆ ಒಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವರಾಜು ಅವರನ್ನು ಶಾಸಕ ಇಕ್ಬಾಲ್ ಹುಸೇನ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. | Kannada Prabha

ಸಾರಾಂಶ

ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ದೇವರಾಜು ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೂಡಲೇ ಗ್ರಾಮಸ್ಥರು ಗಾಯಗೊಂಡ ಯುವಕನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾಸ್ಪತ್ರೆಯಲ್ಲಿ ಸಿಟಿಸ್ಕ್ಯಾನ್ ಯಂತ್ರ ಇಲ್ಲ, ಅಪಘಾತವಾಗಿ ಹತ್ತು ದಿನಗಳು ಕಳೆದರೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುತ್ತಿಲ್ಲ, ರೋಗಿಗಳಿಗೆ ಸರಿಯಾದ ಮಾಹಿತಿ ನೀಡುವ ಸಿಬ್ಬಂದಿಗಳಿಲ್ಲ ಎಂಬ ಹಲವು ಸಮಸ್ಯೆಗಳ ಬಗ್ಗೆ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಶಾಸಕ ಇಕ್ಬಾಲ್‌ಹುಸೇನ್ ರವರ ಗಮನ ಸೆಳೆದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕೋಟಹಳ್ಳಿ ಗ್ರಾಮದ ಬಳಿ ಅರ್ಕಾವತಿ ನದಿ ತೀರದಲ್ಲಿ ಒಂಟಿ ಸಲಗ ದಾಳಿಯಿಂದ ಗಾಯಗೊಂಡಿದ್ದ ದೇವರಾಜು ಅವರ ಆರೋಗ್ಯ ವಿಚಾರಿಸಲು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ರೋಗಿಗಳು ಮತ್ತು ಸಾರ್ವಜನಿಕರು ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡರು.

ಆಸ್ಪತ್ರೆಯ ಮಾಹಿತಿ ಕೇಂದ್ರ ಮತ್ತು ಸ್ವಾಗತಕಾರ ಕೌಂಟರ್‌ನ ಸಿಬ್ಬಂದಿ ಇಲ್ಲದೆ ರೋಗಿಗಳು ನಿಂತಿದ್ದ ದೃಶ್ಯ ಕಂಡ ಶಾಸಕ ಇಕ್ಬಾಲ್ ರವರು ಕೌಂಟರ್‌ನಲ್ಲಿ ಸಿಬ್ಬಂದಿಯೇ ಇಲ್ಲ, ಎಲ್ಲಿ ಹೋದರು. ಹೀಗಾದರೆ ರೋಗಿಗಳಿಗೆ ಮಾಹಿತಿ ನೀಡುವವರು ಯಾರು ಎಂದು ಪ್ರಶ್ನಿಸಿದರು. ಅಲ್ಲದೆ, ವೈದ್ಯರ ಕೊಠಡಿ ಮುಂಭಾಗ ರೋಗಿಗಳು ತಪಾಸಣೆಗೆ ಕಾದು ಕುಳಿತಿದ್ದದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ನಗರದ ಮೋತಿನಗರದ ವಾಸಿ ರಾಕೇಶ್ ಕುಮಾರ್ ಸಿಂಗ್‌ ಗೆ ಅಪಘಾತವಾಗಿ ಹತ್ತು ದಿನಗಳು ಕಳೆದಿವೆ. ಆದರೆ, ಶಸ್ತ್ರ ಚಿಕಿತ್ಸೆ ಮಾಡುತ್ತಿಲ್ಲ, ಸಿಟಿಸ್ಕ್ಯಾನ್ ಇಲ್ಲಿಲ್ಲ, ಹೊರಗಡೆ ಮಾಡಿಸಬೇಕಿದೆ ಎಂದು ಆತನ ಪತ್ನಿ ಶಾಸಕರ ಗಮನ ಸೆಳೆದರು.

ಶಾಸಕರು ಕೂಡಲೇ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಂಜುನಾಥ್‌ಗೆ ಫೋನ್ ಕರೆ ಮಾಡಿ, ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಸಕಾಲದಲ್ಲಿ ಸಾರ್ವಜನಿಕರಿಗೆ ಸಿಗಬೇಕು. ಆಸ್ಪತ್ರೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಿರಬೇಕೆಂದು ನಿಮಗೆ ತಿಳಿಸಿದ್ದೇನೆ. ಆದರೆ, ನಾನು ಆಸ್ಪತ್ರೆಗೆ ಭೇಟಿ ಕೊಟ್ಟ ತಕ್ಷಣ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರುಗಳು ನೀಡಿದ್ದಾರೆ. ಕೂಡಲೇ ಸ್ಪಂದಿಸುವ ಕೆಲಸ ಮಾಡಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವಲ್ಲಿ ನೀವು ವಿಫಲವಾದರೆ ನಮ್ಮ ಶ್ರಮ ಸಾರ್ಥಕವಾಗುವುದಿಲ್ಲ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾಸ್ಪತ್ರೆ ವೈದ್ಯ ಡಾ.ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಯ್ಯ, ಹಾರೋಹಳ್ಳಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್, ಬಮೂಲ್ ನಿರ್ದೇಶಕ ಹರೀಶ್‌ಕುಮಾರ್, ಮುಖಂಡ ಅನಿಲ್ ಜೋಗೇಂದರ್ ಮತ್ತಿತರರು ಇದ್ದರು.

ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಒಂಟಿ ಸಲಗ ದಾಳಿ :

ರಾಮನಗರ: ಅರ್ಕಾವತಿ ನದಿ ಬಳಿ ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ತಾಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವರಾಜು(25) ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ದೇವರಾಜು ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೂಡಲೇ ಗ್ರಾಮಸ್ಥರು ಗಾಯಗೊಂಡ ಯುವಕನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು.

ಜಿಲ್ಲಾಸ್ಪತ್ರೆಗೆ ಶಾಸಕ ಇಕ್ಬಾಲ್ ಹುಸೇನ್ ಭೇಟಿ, ಗಾಯಾಳು ದೇವರಾಜು ಆರೋಗ್ಯ ವಿಚಾರಿಸಿ, ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂಬಂಧ

ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ