ಬಿಎಸ್‌ಎನ್‌ಎಲ್‌ ಟವರ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

KannadaprabhaNewsNetwork | Published : Oct 21, 2024 12:32 AM
ಶಿವಮೊಗ್ಗದಲ್ಲಿ ಭಾನುವಾರ ಸಂಸದ ಬಿ. ವೈ. ರಾಘವೇಂದ್ರ ಅವರು ಬಿ ಎಸ್‌ ಎನ್‌ ಎಲ್‌ ಮತ್ತು ಅರಣ್ಯ  ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಶಿವಮೊಗ್ಗದಲ್ಲಿ ಭಾನುವಾರ ಸಂಸದ ಬಿ.ವೈ.ರಾಘವೇಂದ್ರ ಅವರು ಬಿಎಸ್‌ಎನ್‌ಎಲ್‌ ಮತ್ತು ಅರಣ್ಯ ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಕನ್ನಡಪ್ರಭವಾರ್ತೆ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಭಾಗಗಳಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಬಿಎಸ್‌ಎನ್ಎಲ್ ಟವರ್ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಜನರ ಬಳಕೆಗೆ ನೀಡುವಂತೆ ಟೆಲಿಕಾಂ ಇಲಾಖೆಯ ಅಧಿಕಾರಿಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.

ಭಾನುವಾರ ಪ್ರವಾಸಿ ಮಂದಿರದಲ್ಲಿ ನಡೆದ ಬಿಎಸ್‌ಎನ್‌ಎಲ್ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಭಾಗಗಳಾದ ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲೂಕಿನ ಬಹುದೂರದ ಮತ್ತು ಗುಡ್ಡಗಾಡು ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಟೆಲಿಕಾಂ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯನ್ನು ಸಾಧಿಸುವಂತೆ ಹೇಳಿದರು.

ಟವರ್‌ಗಳನ್ನು ನಿರ್ಮಾಣ ಮಾಡಲು ಅರಣ್ಯ ಇಲಾಖೆಯ ಜಾಗವನ್ನು ಲೀಸ್(ಬಾಡಿಗೆ)ಮೂಲಕ ನೀಡಲು ಕೆಲವು ಗ್ರಾಮಗಳ ಜಾಗದ ಬಗ್ಗೆ ಕರಾರು ಒಪ್ಪಂದಗಳನ್ನು ಮಾಡಿಕೊಂಡಿದ್ದು, ಟವರ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಯವರು ಟೆಲಿಕಾಂ ಇಲಾಖೆಗೆ ಜಾಗವನ್ನು ಹಸ್ತಾಂತರಿಸದೇ ಇರುವುದು ಗಮನಕ್ಕೆ ಬಂದಿದ್ದು, ಮೂರು ದಿನದ ಒಳಗಾಗಿ ಬಿಎಸ್ಎನ್ಎಲ್ ಇಲಾಖೆಗೆ ತಕ್ಷಣವೇ ಜಾಗವನ್ನು ಹಸ್ತಾಂತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಿಎಸ್‌ಎನ್‌ಎಲ್ ಟವರ್‌ಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗದ ಪ್ರದೇಶಗಳಿಗೆ ಸ್ಯಾಟಲೈಟ್ ಮೂಲಕ ನೆಟ್‌ವರ್ಕ್ ಸೌಲಭ್ಯವನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಮುಂದಾಗಿದ್ದು, ಈ ನಿಟ್ಟಿನಲ್ಲಿ ಅಂತಹ ಪ್ರದೇಶಗಳನ್ನು ಗುರುತಿಸಿ ನೆಟ್‌ವರ್ಕ್ ಸೌಲಭ್ಯವನ್ನು ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಬಿಎಸ್‌ಎನ್ಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಡಿಸಿ ಗುರುದತ್ತ ಹೆಗಡೆ, ಸಿಸಿಎಫ್‌ಕೆಟಿ ಹನುಮಂತಪ್ಪ, ಬಿಎಸ್ಎನ್ಎಲ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೃಷ್ಣ ಮೊಗೇರ, ಜಿಲ್ಲೆಯ ಎಲ್ಲಾ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮತ್ತು ಇತರೆ ಟೆಲಿಕಾಂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.