ಮಲಹೊರುವ ಪದ್ದತಿ ಸಂಪೂರ್ಣ ನಿರ್ಮೂಲನೆ ಅಗತ್ಯ

KannadaprabhaNewsNetwork |  
Published : Dec 19, 2025, 01:30 AM IST
೧೮ಶಿರಾ೪: ಶಿರಾ ನಗರಸಭೆಗೆ ಇಸ್ರೋ ಸಂಸ್ಥೆ ವತಿಯಿಂದ ಸೆಫ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಆಧುನಿಕ ಯಂತ್ರೋಪಕರಣ ಜಲೋದ್ ಬಸ್ಟ್ ಯಂತ್ರವನ್ನು ನಗರಸಭೆಗೆ ಹಸ್ತಾಂತರಿಸಲಾಯಿತು. | Kannada Prabha

ಸಾರಾಂಶ

ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಖರೀದಿಸಿ ಅದರಿಂದ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯ ಓಬಳೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗಬೇಕು. ಈ ನಿಟ್ಟಿನಲ್ಲಿ ಸೆಫ್ಟಿಕ್ ಟ್ಯಾಂಕ್, ಮ್ಯಾನ್ ಹೋಲ್ ಸ್ವಚ್ಛತೆಗೆ, ಪುರಸಭೆ, ನಗರಸಭೆ, ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಖರೀದಿಸಿ ಅದರಿಂದ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯ ಓಬಳೇಶ್ ತಿಳಿಸಿದರು.

ಅವರು ಗುರುವಾರ ಮಲಹೊರುವ ಪದ್ದತಿ ನಿರ್ಮೂಲನೆ ಹಾಗೂ ಸಫಾಯಿ ಕರ್ಮಚಾರಿಗಳ ಘನತೆಯ ಬದುಕು ನಿಮಿಸುವ ಉದ್ದೇಶದಿಂದ ಸೆಫ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಆಧುನಿಕ ಯಂತ್ರೋಪಕರಣ ಜಲೋದ್ ಬಸ್ಟ್ ಯಂತ್ರವನ್ನು ಅಂತರಿಕ್ಷ ಕಾರ್ಪೋರೇಟ್ ಲಿಮಿಟೆಡ್ ಇಸ್ರೋ ಇವರ ಸಿ.ಎಸ್.ಆರ್. ನಿಧಿಯಲ್ಲಿ ಶಿರಾ ನಗರಸಭೆಗೆ ನೀಡಿದ್ದ ಜಲೋದ್ ಬಸ್ಟ್ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಮಲ ಹೊರುವ (ಮ್ಯಾನ್ಯುಯಲ್ ಸ್ಕ್ಯಾವೆಂಜರ್) ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಮ್ಯಾನ್ ಹೋಲ್, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಅಧುನಿಕ ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಬೇಕು ಯಾವುದೇ ಕಾರಣಕ್ಕೂ ಸೆಫ್ಟಿಕ್ ಟ್ಯಾಂಕ್, ಮ್ಯಾನ್ ಹೋಲ್ ಸ್ವಚ್ಛತೆಗೆ ಮನುಷ್ಯರನ್ನು ಬಳಸಿ ಸ್ವಚ್ಛತೆ ಮಾಡಬಾರದು ಎಂದರು.

ಪೌರಾಯುಕ್ತ ರುದ್ರೇಶ್ ಅವರು ಮಾತನಾಡಿ, ಶಿರಾ ನಗರದಲ್ಲಿ ಮಲ ಹೊರುವ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಂಡಿದ್ದೇವೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸಿ ಅವರಿಗೆ ನಗರಸಭೆಯಲ್ಲಿ ಉದ್ಯೋಗವಕಾಶ ನೀಡಿದ್ದೇವೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿ ನಿರ್ಮೂಲನೆ ಆಗಬೇಕು. ಇದಕ್ಕೆ ಸಾರ್ವಜನಿಕರೂ ಸಹ ಸಹಕಾರ ನೀಡಬೇಕು ಎಂದ ಅವರು, ಇಸ್ರೋದವರು ಸುಮಾರು ೨೦ ಲಕ್ಷ ಬೆಲೆ ಬಾಳುವ ಜಲೋದ್ ಬಸ್ಟ್ ಸ್ವಚ್ಛತಾ ಯಂತ್ರ ನೀಡಿರುವುದು ಶಿರಾ ನಗರಕ್ಕೆ ಅನುಕೂಲವಾಗಿದೆ. ಇದನ್ನು ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಇಸ್ರೋದ ಆರ್ಥಿಕ ಸಲಹೆಗಾರರಾದ ಡಾ. ಶಂಕರಿ ಮುರುಳಿ ಅವರು ಮಾತನಾಡಿ ಭಾರತ ಸೇರಿದಂತೆ ಅಂತರ ರಾಷ್ಟ್ರೀಯ ಮಟ್ಟದಲ್ಲೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿ ಇದೆ. ಇದಕ್ಕೆ ಕಾರಣ ತಂತ್ರಜ್ಞಾನ ಕಡಿಮೆ ಇರುವುದು. ಈ ನಿಟ್ಟಿನಲ್ಲಿ ಇಸ್ರೋ ಸಂಸ್ಥೆಯ ವತಿಯಿಂದ ಆಧುನಿಕ ಯಂತ್ರ ನೀಡಲಾಗುತ್ತಿದೆ. ಈ ಯಂತ್ರವನ್ನು ಉಪಯೋಗಿಸಿಕೊಂಡು ಮಲ ಹೊರುವ ಪದ್ಧತಿ ನಿರ್ಮೂಲನೆಗೆ ಸಹಕರಿಸಿ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಅಂತರಿಕ್ಷ ಕಂಪನಿಯ ಅಧ್ಯಕ್ಷ ಸಂಜಯ್ ಕುಮಾರ್ ಅಗರವಾಲ್, ಜಲಾದ್ ಬಸ್ತ್ ನಿರ್ಮಾತೃ ರಾಕೇಶ್ ಕಸಬ, ಅಂತರಿಕ್ಷ ಕಂಪನಿಯ ಮಾಜಿ ಅಧ್ಯಕ್ಷ ಡಾ. ಅಜಿತ್ ಕಲಘಟಕಿ, ಬಯೋ ಹೋಮ್ ಸಂಸ್ಥೆಯ ಸಂಚಾಲಕ ಚಂದ್ರಶೇಖರ್, ಹಿರಿಯ ವ್ಯವಸ್ಥಾಪಕ ರವೀಂದ್ರ ಎಚ್ ಎಸ್, ನಗರಸಭೆ ಸದಸ್ಯರಾದ ಮಹೇಶ್, ಧ್ರುವಕುಮಾರ್, ಸುಶೀಲ ವಿರೂಪಾಕ್ಷ, ಫರ್ಮಾನ್, ನಗರಸಭೆ ಪರಿಸಭೆ ಪರಿಸರ ಅಭಿಯಂತರರಾದ ಪಲ್ಲವಿ, ಆರೋಗ್ಯ ನಿರೀಕ್ಷರದ ಶ್ರೀಕಾಂತ್, ಜಗನ್ನಾಥ, ಮುಖಂಡರಾದ ವಿಜಯರಾಜ್, ಮಜರ್ ಸಾಬ್, ವಿಜಯ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು