ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಭೋಸರಾಜು

KannadaprabhaNewsNetwork |  
Published : Nov 22, 2025, 03:00 AM IST
ಚಿತ್ರ : 21ಎಂಡಿಕೆ1 : ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಮಾತನಾಡಿದರು.  | Kannada Prabha

ಸಾರಾಂಶ

2025-26ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಲೋಕೋಪಯೋಗಿ, ಪಂಚಾಯತ್‌ ರಾಜ್ ಹಾಗೂ ನೀರಾವರಿ ಇಲಾಖೆ ವ್ಯಾಪ್ತಿಯ ರಸ್ತೆಗಳು ಹದಗೆಟ್ಟಿದ್ದು, ಈಗಾಗಲೇ ಮಳೆಗಾಲ ಮುಗಿದಿರುವುದರಿಂದ ಶೀಘ್ರ ರಸ್ತೆ ಕಾಮಗಾರಿ ಕೈಗೊಂಡು ಪೂರ್ಣಗೊಳಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮಳೆ ನಿಂತು 20 ದಿನಗಳಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸಬೇಕು. ಸರ್ಕಾರದಿಂದಲೂ ಸಹ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದು, ರಸ್ತೆ ಕಾಮಗಾರಿ ಕೈಗೊಂಡು ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡುವಂತೆ ಎನ್.ಎಸ್.ಭೋಸರಾಜು ನೀಡಿದರು.ಕೊಡಗು ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಕೆಲಸಗಳು ತೃಪ್ತಿದಾಯಕವಾಗಿಲ್ಲ. ಮಳೆ ನಿಂತು 20 ದಿನವಾದರೂ ಕಾಮಗಾರಿಯನ್ನು ಕೈಗೊಳ್ಳದಿರುವುದು ಬೇಸರ ತರಿಸಿದೆ ಎಂದು ಸಚಿವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಸರ್ಕಾರ ಹಣ ನೀಡಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಾಲಮಿತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದರು.

ಶಾಸಕ ಎ.ಎಸ್.ಪೊನ್ನಣ್ಣ ಅವರು ಸಿದ್ದಾಪುರ ರಸ್ತೆ ಕಾಮಗಾರಿ ಇನ್ನೂ ಸಹ ಪೂರ್ಣಗೊಳಿಸಿಲ್ಲ. ಮಾಕುಟ್ಟ ಸೇರಿದಂತೆ ಎಲ್ಲಾ ಕಡೆ ರಸ್ತೆಯನ್ನು ಸರಿಪಡಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆಗಳು ಗುಂಡಿಯಾಗಿದ್ದು, ಸಾರಿಗೆ ಸಂಚಾರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ರಸ್ತೆ ಗುಂಡಿ ಮುಚ್ಚುವ ಕೆಲಸ ಆಗಬೇಕು ಎಂದು ಸೂಚಿಸಿದರು. ಇನ್ನೂ 4-5 ತಿಂಗಳು ಮಾತ್ರ ರಸ್ತೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಗಾಳಿಬೀಡು ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಆಗಿ ಒಂದು ವಾರ ಕಳೆದಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭಿಸಿಲ್ಲ ಏಕೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರನ್ನು ಪ್ರಶ್ನಿಸಿದರು.ಶಾಸಕರಾದ ಡಾ.ಮಂತರ್ ಗೌಡ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಸಿಗಬೇಕು. ಯಾವುದೇ ಕಾರಣಕ್ಕೂ ಹೊರಗಡೆಗೆ ಚೀಟಿ ಬರೆಯಬಾರದು ಎಂದು ತಾಕೀತು ಮಾಡಿದರು.

ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕ ಮಂತರ್ ಗೌಡ, ಅವರು ಈ ಬಾರಿ 22 ದಿನ ಮಳೆ ರಜೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಿ ನಂಬರ್ ಒನ್ ಸ್ಥಾನಕ್ಕೆ ತರುವಂತೆ ಸೂಚಿಸಿದರು.

ಈ ಕುರಿತು ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ಅವರು ಶನಿವಾರ ಪೂರ್ಣ ದಿನ ಶಾಲೆ ನಡೆಸಲಾಗುತ್ತಿದೆ. ಡಿಸೆಂಬರ್ ಒಳಗೆ ಪಠ್ಯಕ್ರಮದಂತೆ ಪಾಠ ಪ್ರವಚನ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕಾಲ ಕಾಲಕ್ಕೆ ಮೌಲ್ಯಯುತ ಪರೀಕ್ಷೆ ನಡೆಸಬೇಕು. ವಿಶೇಷ ತರಗತಿ ನಡೆಸಿ ಹೆಚ್ಚಿನ ಫಲಿತಾಂಶಕ್ಕೆ ಶ್ರಮಿಸಬೇಕು ಎಂದರು.

ಶಾಸಕ ಮಂತರ್ ಗೌಡ ಅವರು ಮೂರು ತಿಂಗಳಿನಿಂದ ಅರ್ಹ ಆದಿವಾಸಿಗಳಿಗೆ ಆಹಾರ ಕಿಟ್ ವಿತರಿಸಿಲ್ಲ, ಆದಿವಾಸಿಗಳು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಏನು ಬೇಕಾದರೂ ಮಾಡಿದರೆ, ಹೇಗೆ ಬೇಕಾದರೂ ನಡೆದುಕೊಂಡರೆ ನಡೆಯುತ್ತದೆ ಎಂಬ ಮನೋಭಾವ ಅಧಿಕಾರಿಗಳಲ್ಲಿ ಇರಬಾರದು. ಕೃತಜ್ಞತಾ ಭಾವ ಇರಬೇಕು ಎಂದು ಸಲಹೆ ಮಾಡಿದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ನಗರ, ಪಟ್ಟಣ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಕಾಲ ಮಿತಿಯಲ್ಲಿ ಪರಿಶೀಲಿಸಿ ಅನುಮತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಿದರು.

ಈ ಕುರಿತು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಧ್ವನಿಗೂಡಿಸಿದರು.

ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರು ರಸ್ತೆ ಸರಿಪಡಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.

ನಗರಸಭೆ ಅಧ್ಯಕ್ಷ ಪಿ.ಕಲಾವತಿ ಮಾತನಾಡಿ, ಮಡಿಕೇರಿ ನಗರ ರಸ್ತೆ ಸರಿಪಡಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಕೋರಿದರು.

ನಾಮ ನಿರ್ದೇಶಿತ ಸದಸ್ಯರಾದ ಸುರೇಶ್, ಲವ ಚಿಣ್ಣಪ್ಪ, ಅಬ್ದುಲ್ ರೆಹಮಾನ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಉಪಕಾರ್ಯದರ್ಶಿ ಚಂದ್ರಶೇಖರ್, ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ಜೀವನ್ ಕುಮಾರ್ ಇತರರು ಇದ್ದರು. ಜಿ.ಪಂ.ಸಿಬ್ಬಂದಿಗಳು ನಾಡಗೀತೆ ಹಾಡಿದರು. ಪವನ್ ಕುಮಾರ್ ನಿರೂಪಿಸಿ, ವಂದಿಸಿದರು.....................

ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ: ಮಂತರ್ ಗೌಡಶಾಸಕ ಡಾ.ಮಂತರ್ ಗೌಡ ಮಾತನಾಡಿ, ಮುಕ್ಕೋಡ್ಲು ಗ್ರಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಜಾಗ ಸೇರಿದೆ ಎಂದು ಏಲಕ್ಕಿ ಗಿಡಗಳನ್ನು ನಾಶ ಮಾಡಲಾಗಿದೆ. ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ. ಆದ್ದರಿಂದ ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಈ ರೀತಿ ಆದರೆ ರೈತರಿಗೆ ಆಗಿರುವ ನಷ್ಟ ಭರಿಸುವವರು ಯಾರು ಎಂದು ಅವರು ಪ್ರಶ್ನಿಸಿದರು.ಈಗಾಗಲೇ ಏಲಕ್ಕಿ ಬೆಳೆದಿರುವ ಪ್ರದೇಶ ಕಂದಾಯ ಇಲಾಖೆ ಅಧಿಕಾರಿಗಳು ಪೈಸಾರಿ ಎಂದು ಹೇಳುತ್ತಾರೆ. ಆದರೆ ಅರಣ್ಯ ಇಲಾಖೆಯವರು ಅರಣ್ಯದ ಜಾಗ ಎಂದು ಹೇಳುತ್ತಾರೆ. ಆದ್ದರಿಂದ ಉಪ ವಿಭಾಗಾಧಿಕಾರಿ ಅವರ ನ್ಯಾಯಾಲಯದಲ್ಲಿ ಪರಿಹರಿಸುವಂತಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಅವರು ಸಭೆಯಲ್ಲಿ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಏಲಕ್ಕಿ ಬೆಳೆದಿರುವ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದೆ. ಯಾವುದೇ ದಾಖಲೆಯಲ್ಲಿ ಅರಣ್ಯ ಭೂಮಿ ಎಂದು ದಾಖಲಾಗಿದ್ದಲ್ಲಿ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ.ಮಂತರ್‌ಗೌಡ, ಕೃಷಿಕರು ಜಾಗ ಒತ್ತುವರಿ ಮಾಡಿಕೊಂಡಿದ್ದಲ್ಲಿ ಅರಣ್ಯ ಅಧಿಕಾರಿಗಳು ನೋಟೀಸ್ ನೀಡಬೇಕಲ್ಲವೇ, ಅದನ್ನು ಬಿಟ್ಟು ಏಲಕ್ಕಿ ಗಿಡಗಳನ್ನು ನಾಶ ಪಡಿಸಿರುವುದು ಏಕೆ ಎಂದು ವಿಡಿಯೊ ಚಿತ್ರ ಸಹಿತ ವಿವರಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಶಿಫ್ಟ್‌ : ಸಂಪುಟ
ಶಕ್ತಿ ಯೋಜನೆ ಫಲಾನುಭವಿ ಸ್ತ್ರೀಯರಿಗೆ ಸ್ಮಾರ್ಟ್‌ಕಾರ್ಡ್‌